ಹಾಸನ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೋವಿಡ್ ನಿಯಂತ್ರಣದಲ್ಲಿ ಸಂಪೂರ್ಣ ವಿಫಲವಾಗಿದ್ದು, ರಾಜ್ಯ ಸರ್ಕಾರಕ್ಕೆ ಇಂತಹ ಸಂದರ್ಭದಲ್ಲಿಯೂ ಹಣ ಮಾಡುವುದೇ ಮುಖ್ಯವಾಗಿದೆ ಎಂದು ಸಂಸದ ಡಿ.ಕೆ. ಸುರೇಶ್ ಆರೋಪಿಸಿದರು.
ನಗರದ ತನ್ವಿತ್ರಿಶಾ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಆರೋಗ್ಯ ಹಸ್ತ ಕಿಟ್ ವಿತರಣೆ ಮತ್ತು ಕೊರೊನಾ ವಾರಿಯರ್‌ಗಳ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆರಂಭದಲ್ಲಿಯೇ ಕೋವಿಡ್ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದರೆ, ಈ ಮಟ್ಟಿನ ಜೀವಹಾನಿ ಆಗುತ್ತಿರಲಿಲ್ಲ ಎಂದು ಆಭಿಪ್ರಾಯಪಟ್ಟರು.
ಪಕ್ಷಾತೀತವಾಗಿ ಕೊರೊನಾ ವೈರಸನ್ನು ಹೋಗಲಾಡಿಸುವ ಉದ್ದೇಶದಿಂದ ನಮ್ಮಪಕ್ಷದಿಂದ ಬಂಬಲ ನೀಡಿದೆವು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೀಪ ಹಚ್ಚಿ, ಚಪ್ಪಾಳೆ ತಟ್ಟಿ ಎಂದು ನೀಡಿದ ಎಲ್ಲಾ ಸೂಚನೆಗಳನ್ನು ಪಾಲಿಸಿದೆವು. ಆದರೆ ಕೊರೊನಾ ನಿಯಂತ್ರಣ ಸಾಧ್ಯವಾಗಲಿಲ್ಲ ಎಂದು ಅಪಹಾಸ್ಯ ಮಾಡಿದರು.
ಕೋವಿಡ್ ನಿಯಂತ್ರಣ ವಿಚಾರದಲ್ಲಿ ರಾಜ್ಯ ಸರ್ಕಾರ ಕೈಚೆಲ್ಲಿದ್ದು, ಆರಂಭದಲ್ಲಿ ಕೊರೊನಾ ಪತ್ತೆಯಾದರೆ, ಇಡೀ ಪ್ರದೇಶ ಅಥವಾ ಊರನ್ನೇ ಸೀಲ್‌ಡೌನ್ ಮಾಡಲಾಗುತ್ತಿತ್ತು. ಬಳಿಕ ಬೀದಿ, ಮನೆಯನ್ನು ಸೀಲ್‌ಡೌನ್ ಮಾಡಲಾಗುತ್ತಿತ್ತು. ಆದರೆ ಈಗ ಕೊರೊನಾದೊಂದಿಗೆ ಬದುಕಲು ಕಲಿಯಿರಿ ಎಂದು ಸರ್ಕಾರ ಹೇಳುತ್ತಿದೆ. ಈಗ ಕೋವಿಡ್ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಸುಲಿಗೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಸಾಕಷ್ಟು ಜನ ರಾಜ್ಯದಲ್ಲಿ ಕೋವಿಡ್‌ನಿಂದಾಗಿ ಉದ್ಯೋಗ ಕಳೆದುಕೊಂಡರು, ಕಾರ್ಮಿಕರು ತಮ್ಮ ಊರುಗಳಿಗೆ ಕಾಲ್ನಡಿಗೆಯಲ್ಲಿ ಸಾಗಬೇಕಯಿತು. ಅನೇಕರು ಒಂದು ಹೊತ್ತಿನ ಊಟಕ್ಕೂ ಪರದಾಡಬೇಕಾಯಿತು. ವ್ಯಾಪಾರ, ಉದ್ಯಮ ನೆಲಕಚ್ಚಿತು. ರೈತರು ತಾವು ಬೆಳೆದ ಬೆಳೆ ಮಾರಾಟ ಮಾಡಲಾಗದೆ ಸಾಕಷ್ಟು ನಷ್ಟ ಅನುಭವಿಸುವಂತಾಯಿತು. ಆದರೆ ಸರ್ಕಾರ ಇವರ ನೆರವಿಗೆ ಧಾವಿಸಿಸಲಿಲ್ಲ ಎಂದು ದೂರಿದರು.
ಕಾಂಗ್ರೆಸ್ ಮುಖಂಡ ಧ್ರುವ ನಾರಾಯಣ್ ಮಾತನಾಡಿ, ಜನ ಸಾಮಾನ್ಯರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಪ್ರತಿ ಗ್ರಾಮ ಪಂಚಾಯಿತಿಗೆ ಇಬ್ಬರು ಕೊರೊನಾ ವಾರಿಯರ್ಸ್ ನೇಮಕ ಮಾಡಿ, ಒಂದು ಆರೋಗ್ಯ ಹಸ್ತ ಕಿಟ್ ವಿತರಣೆ ಮಾಡಲಾಗುತ್ತಿದೆ. ಒಂದು ಕಿಟ್‌ನಲ್ಲಿ ಅಂದಾಜು 4,500 ಬೆಲೆಯ ಉಪಕರಣಗಳು ಇರಲಿವೆ. ಥರ್ಮಲ್ ಸ್ಕ್ರೀನಿಂಗ್ ಯಂತ್ರ, ಆಕ್ಸಿ ಮೀಟರ್, ಪಿಪಿಇ ಕಿಟ್, ಫೇಸ್ ಶೀಲ್ಡ್, ಹ್ಯಾಂಡ್ ಗ್ಲೌಸ್, ಮಾಸ್ಕ್, ಸ್ಯಾನಿಟೈಸರ್ ಹಾಗೂ ಕೋವಿಡ್ ನಿಯಂತ್ರಣ ರ್ಮಾಸೂಚಿ ಇರಲಿದೆ. ಪ್ರತಿ ಮನೆ ಮನೆಗೂ ಕೊರೊನಾ ವಾರಿಯರ್ಸ್ ಭೇಟಿ ನೀಡಿ ಆರೋಗ್ಯ ತಪಾಸಣೆ ನಡೆಸಿ ಮಾಹಿತಿ ಸಂಗ್ರಹಿಸಲಿದ್ದಾರೆ ಎಂದು ತಿಳಿದರು.
ಡಾ. ಮಧುಸೂದನ್ ಅವರು ಪಿಪಿಇ ಕಿಟ್ ಬಳಕೆ, ಥರ್ಮಲ್ ಸ್ಕ್ರೀನಿಂಗ್ ಮಾಡುವ ವಿಧಾನ ಇತ್ಯಾದಿಗಗಳ ಕುರಿತು ತರಬೇತಿ ನೀಡಿದರು.