ಹಾಸನ: ಕೊರೊನಾ ನಿಯಂತ್ರಣ ಮಾಡುವಲ್ಲಿ ಸರ್ಕಾರ ವಿಫಲವಾಗಿದ್ದು, ಇತರೆ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಸಾಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಬಗ್ಗೆ ಆರೋಗ್ಯ ಮಂತ್ರಿ ಏನೂ ಮಾತನಾಡುತ್ತಿಲ್ಲ ಎಂದು ಮಾಜಿ ಸಂಸದ ಧ್ರುವನಾರಾಯಣ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದಿಂದ ರಾಜ್ಯಕ್ಕೆ ತೆರಿಗೆ ರೂಪದ ಹಣ ಸುಮಾರು 13 ಸಾವಿರ ಕೋಟಿ ಬರಬೇಕಿದೆ. ಆದರೆ ಸಾಲ ರೂಪದಲ್ಲಿ ಕೊಡುವುದಾಗಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಹೇಳಿದೆ. ಈ ಸಂಬಂಧ ಎಲ್ಲಾ ಜಿಲ್ಲೆಗಳಲ್ಲಿ ಹೋರಾಟ ಮಾಡಿದ್ದೇವೆ ಎಂದರು.
ಕೊರೊನಾ ಮಹಾಮಾರಿ ಭೀತಿ ಹಿನ್ನೆಲೆ ಕಾಂಗ್ರೆಸ್ ಪಕ್ಷದವತಿಯಿಂದ 320 ಮಂದಿ ವೈದ್ಯರು ಕೆಲಸ ನಿರ್ವಹಿಸುತ್ತಿದ್ದಾರೆ. ವೈದ್ಯರುಗಳು ಮನೆ ಮನೆಗೆ ಭೇಟಿ ನೀಡಿ ಕೊರೊನಾ ತಪಾಸಣೆ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಜನರ ಆರೋಗ್ಯ ದೃಷ್ಟಿಯಿಂದ ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷದಿಂದ ಆರೋಗ್ಯ ಹಸ್ತ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈಗಾಗಲೇ ಆರೋಗ್ಯ ಹಸ್ತ ಕಾರ್ಯಕ್ರಮಕ್ಕೆ 15 ಸಾವಿರ ಕೊರೊನಾ ವಾರಿಯರ್ಸ್ಗೆ ತರಬೇತಿ ನೀಡಲಾಗುತ್ತಿದೆ ಎಂದರು.
ಗ್ರಾಮ ಪಂಚಾಯಿತಿ ಮಟ್ಟದವರೆಗೆ ಕಾರ್ಯಕ್ರಮ ತಲುಪಿಸುವ ಕೆಲಸ ಮಾಡಲಾಗುತ್ತಿದ್ದು, ನುರಿತ ತಜ್ಞರ ಸಹಾಯದಿಂದ ಕೊರೊನಾ ತಪಾಸಣೆ ಹಾಗೂ ತರಬೇತಿ ನೀಡಲಾಗುತ್ತಿದೆ. ಜನರ ತಪಾಸಣೆ ಮಾಡುವವರ ರಕ್ಷಣೆಗೆ ಆರೋಗ್ಯ ರಕ್ಷಣಾ ಕಿಟ್ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.