ಹಾಸನ: ಗ್ರಾಮ ಪಂಚಾಯಿತಿ ಸದಸ್ಯರ ಸ್ಥಾನಕ್ಕೆ ಮೀಸಲು ಪುನರ್ ನಿಗದಿಪಡಿಸಲು ಆದೇಶ ಹೊರಡಿಸಿ ಸಾಮಾಜಿಕ ನ್ಯಾಯ ಒದಗಿಸಿ ಕೊಡುವಂತೆ ಒತ್ತಾಯಿಸಿ ಗೊಂದಿಮಲ್ಲೇನಹಳ್ಳಿ ಗ್ರಾಮಸ್ಥರು ಇಂದು ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಿದರು.
ಹೊಳೆ ನರಸೀಪುರ ತಾಲೂಕಿನ ಕಸಬಾ ಹೋಬಳಿಯ ಗೊಂದಿಮಲ್ಲೇನಹಳ್ಳಿ ಗ್ರಾಮ ಪಂಚಾಯಿತ ಸದಸ್ಯ ಸ್ಥಾನಗಳ ಮೀಸಲಾತಿಯಲ್ಲಿ ನ್ಯೂನತೆಗಳುಂಟಾಗಿದ್ದು, ಜಿಲ್ಲಾಧಿಕಾರಿಗಳು ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಮೀಸಲಾತಿ ನಿಗದಿಪಡಿಸಿ 2020 ಜುಲೈ 24ರಲ್ಲಿ ಅಧಿಸೂಚನೆ ಹೊರಡಿಸಿದ್ದಾರೆ. ಆದರೆ, ಈ ಅಧಿಸೂಚನೆ ಗಮನಿಸಿದಾಗ ಕಸಬಾ ಹೋಬಳಿಯ ಮಲ್ಲಪ್ಪನಹಳ್ಳಿ ಹಾಗೂ ಗೊಂದಿಮಲ್ಲೇನಹಳ್ಳಿ ಗ್ರಾ.ಪಂ ಸದಸ್ಯ ಸ್ಥಾನಗಳ ಮೀಸಲು ನ್ಯೂನತೆಗಳು ಕಂಡು ಬಂದಿದ್ದು, ಇದರ ಬಗ್ಗೆ ಆಕ್ಷೇಪಣೆ ಸಲ್ಲಿಸಲಾಗಿತ್ತು ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ಅಧಿಸೂಚನೆ ಪ್ರಕಟಣೆ ಆಗುವ ಪೂರ್ವದಲ್ಲಿ ಕಾನೂನಾತ್ಮಕವಾಗಿ ತಕರಾರು ಸ್ವೀಕರಿಸುವ ಬಗ್ಗೆ ಮತ್ತು ಆ ರೀತಿಯ ಅಧಿಸೂಚನೆಗಳಿಗೆ ಪ್ರಶ್ನೆ ಮಾಡುವ ಅವಕಾಶಗಳನ್ನು ನೀಡಲಾಗಿದೆ. ಸರ್ಕಾರವು ಆ ರೀತಿಯ ಯಾವುದೇ ಕ್ರಮಗಳನ್ನು ಅನುಸರಿಸಿಲ್ಲ. ಹಿಂದಿನ ಅಧಿಸೂಚನೆಗೆ ಸೂಕ್ತ ಕಾನೂನು ರೀತಿಯ ಬದಲಾವಣೆಯನ್ನು ತರದೇ ಮತ್ತು ಮಾರ್ಗಸೂಚಿಗಳನ್ನು ಅನುಸರಿಸದೇ ಏಕಾ -ಏಕಿ ಅಧಿಸೂಚನೆ ಹೊರಡಿಸಿರುವುದು ಕಾನೂನಿಗೆ ವಿರುದ್ಧವಾಗಿರುತ್ತದೆ ಎಂದು ದೂರಿದರು.
ಈ ಹಿಂದೆ ನೀಡಿರುವ ತಕರಾರು ಪತ್ರಕ್ಕೆ ಜಿಲ್ಲಾಧಿಕಾರಿಗಳು ಪತ್ರದ ಮುಖಾಂತರ ಮುಖ್ಯ ಚುನಾವಣಾಧಿಕಾರಿಗಳಿಗೆ ಮಾಹಿತಿ ನೀಡುವುದಾಗಿ ತಿಳಿಸಿ ಮತ್ತು ನಮ್ಮಗಳ ಅರ್ಜಿಯ ಬಗ್ಗೆ ಸೂಕ್ತ ಕ್ರಮ ತೆಗೆದುಕೊಂಡು ಕಾನೂನು ತೊಡಕುಗಳನ್ನು ನಿವಾರಿಸುವುದಾಗಿ ತಿಳಿಸಿದ್ದರು. ಆದರೆ, ಈವರೆಗೂ ಯಾವುದೇ ಕ್ರಮ ತೆಗೆದುಕೊಂಡಿರುವುದಿಲ್ಲ. ಅಧಿಸೂಚನೆಯಲ್ಲಿರುವ ನ್ಯೂನ್ಯತೆ ಸರಿಪಡಿಸಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಸದಸ್ಯರ ಸ್ಥಾನಕ್ಕೆ ಮೀಸಲು ಪುನರ್ ನಿಗದಿಪಡಿಸಿ ಆದೇಶ ಹೊರಡಿಸಿ ಸಾಮಾಜಿಕ ನ್ಯಾಯ ಒದಗಿಸುವಂತೆ ಕೋರಿದರು.