ಹಾಸನ: ಸಾಹಿತ್ಯ ಸಮ್ಮೇಳನ, ಧಾರ್ಮಿಕ ಸಮಾವೇಶ, ಮಸ್ತಕಾಭಿಷೇಕ ಸಮಾರಂಭ, ಮಕ್ಕಳ ವಾರ್ಷಿಕ ಸಮಾರಂಭಗಳ ನಡುವೆ ಇದೇ ಮೊದಲ ಬಾರಿಗೆ ಗಣಿತ ಸಮ್ಮೇಳನ ಆಯೋಜನೆ ಮಾಡಿರುವುದು ತುಂಬಾ ಸಂತಸ ತಂದಿದೆ ಎಂದು ದಕ್ಷಿಣ ಜೈನಕಾಶಿ ಪೀಠಾಧ್ಯಕ್ಷ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.
ಹಾಸನದ ಜೈನಕಾಶಿಯಲ್ಲಿ ಎರಡು ದಿನಗಳ ಕಾಲ ನಡೆಯುತ್ತಿರುವ ಗಣಿತ ಉತ್ಸವ ಸಮ್ಮೇಳನ ಉದ್ಘಾಟನೆ ಮಾಡಿದ ಬಳಿಕ ಮಾತನಾಡಿದ ಅವರು, ಗಣಿತ ಯಾರಿಗೆ ಬೇಡ ಹೇಳಿ. ದೇಶದ ಪ್ರತಿಯೊಬ್ಬರಿಗೂ ಗಣಿತ ಅಗತ್ಯವಾಗಿ ಬೇಕಿದೆ. ಆದರೆ, ನಮ್ಮ ವಿದ್ಯಾರ್ಥಿಗಳು ಗಣಿತ ವಿಚಾರದಲ್ಲಿ ಸಾಕಷ್ಟು ಹಿಂದೆ ಉಳಿದಿದ್ದಾರೆ. ನಾವುಗಳು ಕೂಡ ಈ ವಿಚಾರದಲ್ಲಿ ಬಹಳಷ್ಟು ಕಲಿಯಬೇಕಿದೆ. ವಿದ್ಯಾರ್ಥಿಗಳಲ್ಲಿ ಗಣಿತ ಜ್ಞಾನವನ್ನು ಹೆಚ್ಚಿಸುವಂತ ಕೆಲಸ ಆಗಬೇಕಿದೆ ಎಂದರು.
ಗಣಿತದ ತಂದೆ ಎಂದು ಕರೆಯಲಾಗುವ ಪೈಥಾಗೋರಸ್ ಗ್ರೀಕ್ನ ಸಂಶೋಧಕ. ಅವನು ಶಾಖಾಹಾರಿ ಆಗಿದ್ದ. ಗಣಿತಕ್ಕೋಸ್ಕರ ತನ್ನ ಜೀವನವನ್ನೇ ಮುಡುಪಾಗಿಟ್ಟು ಪ್ರಪಂಚಕ್ಕೆ ಗಣಿತದ ದಾರ್ಶನಿಕನಾದ. ಭಾರತದ ವೇದದಲ್ಲಿಯೂ ಗಣಿತ ಶಾಸ್ತ್ರವಿದೆ. ಶ್ರವಣಬೆಳಗೊಳದಲ್ಲಿ ಪ್ರಾಕೃತ ವಿಶ್ವವಿದ್ಯಾಲಯವಿದ್ದು, ಧವಳದಲ್ಲಿ ಗಣಿತವಿದೆ. ಹೀಗಾಗಿ, ಪ್ರತಿಯೊಂದು ಧರ್ಮದಲ್ಲಿಯೂ ಗಣಿತ ಬಹಳ ಮುಖ್ಯ ಪಾತ್ರ ವಹಿಸಿದೆ. ವಿಶ್ವದಲ್ಲಿಯೇ ಗಣಿತ ತನ್ನದೆಯಾದ ಮಹತ್ವ ಪಡೆದುಕೊಂಡಿದೆ ಎಂದು ಹೇಳಿದರು.
ಗಣಿತ ಸಮ್ಮೇಳನದ ಸಮ್ಮೇಳನಾಧ್ಯಕ್ಷೆ ಪದ್ಮಾವತಮ್ಮರವರ ಮಾತು
ಗಣಿತ ಸಮ್ಮೇಳನದ ಅಧ್ಯಕ್ಷೆ ಪದ್ಮಾವತಮ್ಮ ಮಾತನಾಡಿ, ಗಣಿತಕ್ಕಾಗಿ ನಾನು ನನ್ನ ಜೀವನವನ್ನೇ ಮುಡಿಪಾಗಿಟ್ಟಿದ್ದೇನೆ. ನನ್ನನ್ನು ಗುರುತಿಸಿ ಗಣಿತ ಸಮ್ಮೇಳನದ ಅಧ್ಯಕ್ಷೆಯನ್ನಾಗಿ ಆಯ್ಕೆ ಮಾಡಿದ್ದು, ನನ್ನ ಪೂರ್ವ ಜನ್ಮದ ಪುಣ್ಯ ಎಂದರು.
ಗಣಿತಕ್ಕೆ ಆರ್ಯಭಟ, ಮಹಾವೀರಚಾರ್ಯರು, ಭಾಸ್ಕರಾಚಾರ್ಯರಂತಹ ಭಾರತೀಯರ ಕೊಡುಗೆ ಸಾಕಷ್ಟಿದೆ. ಗಣಿತ ವಿಜ್ಞಾನ ಯುಗದಲ್ಲಿ ಮಹಾರಾಣಿ ಎಂದು ಕರೆಯುತ್ತೇವೆ. ಮಹಾವೀರ್ ಆಚಾರ್ಯರು ಗಣಿತ ಸಾರಸಂಗ್ರಹ ಎಂಬ ಗ್ರಂಥ ರಚಿಸಿದ್ದಾರೆ. ಹಿಂದೆ ಅವರು ಬರೆದಿರುವ ಗಣಿತಕ್ಕೆ ಅಷ್ಟು ಸ್ಥಾನಮಾನ ಇರಲಿಲ್ಲ. ಆಗ ಗಣಿತ ಜ್ಯೋತಿಷ್ಯರ ಹಿಡಿತದಲ್ಲಿತ್ತು. ಆಗ ಮಹಾವೀರ್ ಆಚಾರ್ಯರು ಬರೆದ ಈ ಪುಸ್ತಕ ಗಣಿತಕ್ಕಾಗಿಯೇ ಮೀಸಲಿಟ್ಟಿದ್ದರಿಂದ ಗಣಿತ ಸಾಕಷ್ಟು ಬಳಕೆಗೆ ಬಂತು ಎಂದು ವಿವರಿಸಿದರು.
ಹಲವರು ಗಣಿತ ಕಲಿಯುವುದು ಕಷ್ಟ ಎನ್ನುತ್ತಾರೆ. ಆದರೆ, ಗಣಿತವನ್ನು ಅತಿ ಸರಳವಾದ ರೀತಿಯಲ್ಲಿ ಬಿಡಿಸುವ ಮಾರ್ಗವನ್ನು ಜೈನ ಗಣಿತ ತಜ್ಞರು ತೋರಿಸಿಕೊಟ್ಟಿದ್ದಾರೆ. ಜೈನಕಾಶಿಯಲ್ಲಿ ಗಣಿತ ಸಮ್ಮೇಳನ ನಡೆಯುತ್ತಿರುವುದು ಖುಷಿಯ ಸಂಗತಿ. ಮುಂದಿನ ದಿನಗಳಲ್ಲಿ ಇಂತಹ ಗಣಿತ ಸಮ್ಮೇಳನಗಳು ರಾಜ್ಯದ ಪ್ರತಿ ಜಿಲ್ಲೆಯಲ್ಲಿ ನಡೆದಾಗ ಮಾತ್ರ ಹೆಚ್ಚು- ಹೆಚ್ಚು ವಿದ್ಯಾರ್ಥಿಗಳು ಗಣಿತದ ಬಗ್ಗೆ ಆಸಕ್ತಿ ತಳೆಯುತ್ತಾರೆ ಎಂದರು.