ಹಾಸನ: ಮನೆಕಳ್ಳತನವನ್ನೇ ಕಸುಬಾಗಿಸಿಕೊಂಡಿದ್ದ ನಾಲ್ವರು ಕುಖ್ಯಾತ ಅಂತರ್ ಜಿಲ್ಲಾ ಕಳ್ಳರನ್ನು ಹೆಡೆಮುರಿ ಕಟ್ಟುವಲ್ಲಿ ಅರಸೀಕೆರೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಗವಿರಾಜ್ (41) ರಂಗನಾಥ್ (43) ಲೋಕೇಶ್ (50) ಹಾಗೂ ವೆಂಕಟೇಶ್ (38) ಬಂಧಿತರು. ಈ ನಾಲ್ಕು ಮಂದಿ ಸುಮಾರು 14 ಪ್ರಕರಣದಲ್ಲಿ ಭಾಗಿಯಾಗಿದ್ದು ಆರೋಪಿಗಳು ಅರಸೀಕೆರೆ ಗ್ರಾಮಾಂತರ ವ್ಯಾಪ್ತಿಯಲ್ಲಿ 3 ಪ್ರಕರಣ, ಬಾಣವಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2 ಪ್ರಕರಣ, ಬೇಲೂರು ಪೊಲೀಸ್ ಠಾಣೆಯಲ್ಲಿ 2 , ಅರೆಹಳ್ಳಿ ಪೊಲೀಸ್ ಠಾಣೆಯಲ್ಲಿ 2, ಹಾಸನ ನಗರ 1, ಅರಕಲಗೂಡು 2, ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ 1 ಚಿಕ್ಕಮಗಳೂರು ಜಿಲ್ಲೆಯ ಯಗಟಿ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ ಸೇರಿದಂತೆ 14 ಪ್ರಕರಣದಲ್ಲಿ ಭಾಗಿಯಾಗಿದ್ದಾರೆ.
ಬಂಧಿತರಿಂದ ಹಾಸನ ಜಿಲ್ಲೆಯ 12 ಪ್ರಕರಣಗಳು ಮತ್ತು ಬಳ್ಳಾರಿ ಜಿಲ್ಲೆಯ ಒಂದು ಪ್ರಕರಣ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಒಂದು ಪ್ರಕರಣ ಸೇರಿ 3.5 ಲಕ್ಷ ಮೌಲ್ಯದ ಚಿನ್ನದ ಆಭರಣ 1.2 ಕೆಜಿ ಬೆಳ್ಳಿ ವಸ್ತುಗಳು ಹಾಗೂ 1 ಲಕ್ಷ ನಗದು ಹಣ ಹಾಗೂ ಒಂದು ಬಜಾಜ್ ದ್ವಿಚಕ್ರವಾಹನವನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಅರಸೀಕೆರೆ ತಾಲೂಕು ಕಾರೆಹಳ್ಳಿ ತಾಂಡಾದ ನವೀನ ನಾಯಕ ಎಂಬುವರು ಫೆಬ್ರವರಿ 14ರಂದು ಖಾಸಗಿ ಕಾರ್ಯಕ್ರಮಕ್ಕೆ ಮನೆಗೆ ಬೀಗ ಹಾಕಿಕೊಂಡು ಹೋಗಿದ್ದು ಮೂರು ದಿನಗಳ ನಂತರ ಮನೆಗೆ ಹಿಂದಿರುಗಿದಾಗ ಮನೆಯ ಹಿಂಬಾಗಿಲನ್ನು ಜಖಂಗೊಳಿಸಿ ಮನೆಯಲ್ಲಿದ್ದ ಸುಮಾರು 1.45 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದರು. ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.