ಹಾಸನ: "ಈ ಹಿಂದೆ ಹೆಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸುವಾಗ ಹಲವು ರಾಜ್ಯಗಳ ನಾಯಕರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಆದರೆ ಈಗ ಜೆಡಿಎಸ್ ಪಕ್ಷವನ್ನು ಹೊರಗಿಟ್ಟು ಇಂಡಿಯಾ ಸಮಾವೇಶ ಮಾಡಿದ್ದು ಸರಿಯೇ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಪ್ರಶ್ನಿಸಿದ್ದಾರೆ. ಹಾಸನದಲ್ಲಿ ಮಾತನಾಡಿದರು ಅವರು, ಬೆಂಗಳೂರಿನಲ್ಲಿ ವಿಪಕ್ಷಗಳ ಒಕ್ಕೂಟ ಇಂಡಿಯಾ, ಜೆಡಿಎಸ್ ಪಕ್ಷವನ್ನ ಹೊರಗಿಟ್ಟು ಸಮಾವೇಶ ಮಾಡಿದ್ದರಿಂದ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಅಮಿತ್ ಶಾ ಅವರು ನಮ್ಮನ್ನು ಸ್ವಾಗತ ಮಾಡಿದರು. ಹೀಗಾಗಿ ನಾವು ಮೈತ್ರಿ ಮಾಡಿಕೊಂಡೆವು" ಎಂದು ಮೈತ್ರಿ ಬಗ್ಗೆ ಸ್ಪಷ್ಟನೆ ನೀಡಿದರು.
"ಈ ಬಗ್ಗೆ ಕಾಂಗ್ರೆಸ್, ಜೆಡಿಎಸ್ ಅನ್ನು ಜಾತ್ಯತೀತ ಪಕ್ಷವಲ್ಲ ಎಂದು ಟೀಕಿಸುತ್ತಿದೆ. ಹಾಗಾಗಿ ಸಂಬಂಧ ಕಳೆದುಕೊಳ್ಳಬೇಕಾದ ಸಂದರ್ಭ ಬಂದಿತ್ತು. ಕುಮಾರಸ್ವಾಮಿ ಸರ್ಕಾರ ತೆಗೆದವರು ಯಾರು?. ಯಾರು ನಮ್ಮನ್ನು ಹೊರಗಿಡಬೇಕೆಂದು ಪ್ರಯತ್ನ ಮಾಡಿದರೋ ಅವರೇ ಹಿಂದಿನ ಮೈತ್ರಿ ಸರ್ಕಾರವನ್ನು ಕೆಡವಿದರು. ನಮ್ಮನ್ನು ಹೊರಗೆ ದೂಡಿದ್ದು ಕಾಂಗ್ರೆಸ್. ನಮ್ಮನ್ನು ಅವರು ಹೊರಗಿಟ್ಟಾಗ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಸ್ವಾಗತಿಸಿದರು" ಎಂದು ಹೇಳಿದರು.
"ಜೆಡಿಎಸ್ ಲೆಕ್ಕಕ್ಕೂ ಇಲ್ಲ, ಆಟಕ್ಕೂ ಇಲ್ಲ. ಕೆಲವೇ ದಿನದಲ್ಲಿ ಜೆಡಿಎಸ್ ಇರುವುದಿಲ್ಲ ಎಂದು ಕಾಂಗ್ರೆಸ್ ಮುಖಂಡರು ಲಘುವಾಗಿ ಮಾತನಾಡಿದ್ದಾರೆ. ನರೇಂದ್ರ ಮೋದಿಯವರು ಪ್ರಧಾನಿಯಾಗಿ ವೈಯಕ್ತಿಕವಾಗಿ ನನ್ನ ಬಗ್ಗೆ ಗೌರವ ಹೊಂದಿದ್ದಾರೆ. ಅವರೇ ನಮ್ಮನ್ನ ಕರೆದಾಗ ಬೇಡ ಇನ್ನಲಾಗುತ್ತಾ?. ಯೋಚಿಸಿ ಒಳ್ಳೆಯ ನಿರ್ಧಾರ ಮಾಡಿದ್ದೇವೆ. ಮುಂದಿನ ರಾಜಕೀಯ ಬೆಳವಣಿಗೆಗಾಗಿ ಕರ್ನಾಟಕದಲ್ಲಿ ನಾವು ಬಿಜೆಪಿ ಜೊತೆ ಕೈ ಜೋಡಿಸುತ್ತೇವೆ. ಕಾಂಗ್ರೆಸ್ ವಿರುದ್ಧ ಹೋರಾಟ ಮಾಡುತ್ತೇವೆ. ಇದರಲ್ಲಿ ಮುಚ್ಚುಮರೆ ಇಲ್ಲ. ನಮ್ಮ ಪಕ್ಷ ಉಳಿಯಬೇಕು" ಎಂದರು.
"ರೈತರ, ಬಡವರ ಅಲ್ಪಸಂಖ್ಯಾತರ ಪರವಾಗಿ ಕೆಲಸ ಮಾಡಿದ್ದೇವೆ. ಅಲ್ಪಸಂಖ್ಯಾತರಿಗೆ, ಮಹಿಳೆಯರಿಗೆ ಮೀಸಲಾತಿ ಕೊಟ್ಟಿದ್ದು ಯಾರು?. ಎಲ್ಲಾ ನಿಮಗೆ ಗೊತ್ತಿದೆ. ಆದರೆ, ಈ ಪಕ್ಷವನ್ನು ಮುಗಿಸೇ ಬಿಡುತ್ತೇವೆ ಎಂದಾಗ ಮೋದಿಯವರು ನಮಗೆ ಒಂದು ಅವಕಾಶ ಮಾಡಿಕೊಟ್ಟಿದ್ದಾರೆ. ಕುಮಾರಸ್ವಾಮಿ ಅವರು ಮುಂದಿನ ದಿನಗಳಲ್ಲಿ ಪ್ರಧಾನಿ, ಗೃಹ ಸಚಿವರು, ಬಿಜೆಪಿ ಅಧ್ಯಕ್ಷರ ಜೊತೆ ಚರ್ಚೆ ಮಾಡುತ್ತಾರೆ. ಅಂತಿಮವಾಗಿ ಲೋಕಸಭಾ ಚುನಾವಣೆ ಬಗ್ಗೆ ನಿರ್ಣಯ ಮಾಡುತ್ತಾರೆ. ನಾವು 28 ಸ್ಥಾನಗಳಿಗೆ ಸ್ಪರ್ಧೆ ಮಾಡಲು ಐಕ್ಯತೆಯಿಂದ ಒಮ್ಮತದ ನಿರ್ಧಾರಕ್ಕೆ ಬರುತ್ತೇವೆ" ಎಂದು ಹೇಳಿದರು.
"ಕುಮಾರಸ್ವಾಮಿ ದೆಹಲಿಗೆ ಹೋಗಿ ಮಾತುಕತೆ ನಡೆಸುತ್ತಾರೆ. ಮುಂದಿನ ವಾರ ಜೆಡಿಎಸ್ - ಬಿಜೆಪಿ ಚುನಾವಣಾ ಮೈತ್ರಿ ಬಗ್ಗೆ ಅಂತಿಮ ಮಾತುಕತೆ ನಡೆಯಲಿದೆ" ಎಂದರು.
ಇದನ್ನೂ ಓದಿ: ಚುನಾವಣಾ ಅಫಿಡವಿಟ್ನಲ್ಲಿ ಅಪೂರ್ಣ ಮಾಹಿತಿ ನೀಡಿದ ಆರೋಪ: ಹೆಚ್ಡಿಕೆ ವಿರುದ್ಧ ಲೋಕಾಯುಕ್ತಕ್ಕೆ ದೂರು