ಹಾಸನ: ದಿನೇ ದಿನೆ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಸೋಂಕು ನಿಯಂತ್ರಣಕ್ಕಾಗಿ ಲಾಕ್ಡೌನ್ ಮಾಡಿದರೆ ನನ್ನ ಅಭ್ಯಂತರವಿಲ್ಲ. ಆದರೆ ಈ ವೇಳೆ ಯಾವುದೇ ಕೊರತೆ ಆಗದಂತೆ ನಿಭಾಯಿಸಲು ಪ್ರತಿ ಜಿಲ್ಲೆಗೆ ಕನಿಷ್ಠ 10 ಕೋಟಿ ರೂ. ಬಿಡುಗಡೆ ಮಾಡಬೇಕು ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಒತ್ತಾಯಿಸಿದರು.
ವಿಡಿಯೋ ಸಂವಾದದಲ್ಲಿ ಭಾಗವಹಿಸಿ ಬಳಿಕ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮುದಾಯ ಆಸ್ಪತ್ರೆಯಲ್ಲಿ 30 ಹಾಸಿಗೆ, ತಾಲೂಕು ಕೇಂದ್ರದಲ್ಲಿ 50, ಖಾಸಗಿ ಆಸ್ಪತ್ರೆಯಲ್ಲಿ ಶೇ. 50 ಎಂದಿದ್ದಾರೆ. ಆದರೆ ಸಮುದಾಯ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರನ್ನು ಸೇರಿಸಿಕೊಳ್ಳುತ್ತಿಲ್ಲ. ತಾಲೂಕು ಕೇಂದ್ರಗಳಲ್ಲಿ 50 ಜನರು ಮಾತ್ರ ದಾಖಲಾಗುತ್ತಿದ್ದಾರೆ. ಹಾಸನ ಜಿಲ್ಲೆಯಲ್ಲಿ ಪ್ರತಿ ನಿತ್ಯ 400ಕ್ಕೂ ಅಧಿಕ ಪಾಸಿಟಿವ್ ಕೇಸ್ಗಳು ಪತ್ತೆಯಾಗುತ್ತಿದ್ದು, ಇದು ಆತಂಕಕಾರಿ ಬೆಳವಣಿಗೆ ಎಂದರು.
ಇನ್ನು ಲಾಕ್ಡೌನ್ ಮಾಡಿದರೆ ಕೂಲಿ ಕಾರ್ಮಿಕರಿಗೆ ನೆರವಾಗಬೇಕು. ಅಕ್ಕಿ, ಗೋಧಿ, ಮತ್ತಿತರ ಸಾಮಗ್ರಿಗಳನ್ನು ಕೊಡಬೇಕು. ತರಕಾರಿ ಅಂಗಡಿಗಳನ್ನ ದಿನಕ್ಕೆ ಎರಡು ಗಂಟೆ ಮಾತ್ರ ತೆಗೆಯಲು ಅವಕಾಶ ನೀಡಿ, ಒಂದಿನ ಬಿಟ್ಟು ಒಂದಿನ ಅಂಗಡಿ ತೆಗೆಯಲು ಸೂಚನೆ ಕೊಡಬೇಕು. ಕಳೆದ ವರ್ಷ ನಮ್ಮ ಜಿಲ್ಲಾಡಳಿತ ಚೆನ್ನಾಗಿ ಕೆಲಸ ಮಾಡಿದೆ. ಈ ಬಾರಿ ಇನ್ನು ಹೆಚ್ಚು ಸೋಂಕು ಹರಡುತ್ತಿರುವುದರಿಂದ 20 ದಿನಗಳ ಕಾಲ ಲಾಕ್ಡೌನ್ ಮಾಡಿದರೆ ಉತ್ತಮ ಎಂದು ರೇವಣ್ಣ ಅಭಿಪ್ರಾಯಪಟ್ಟರು.