ಹಾಸನ: ಕಾವೇರಿ ನೀರಾವರಿ ನಿಗಮ ಬಿಜೆಪಿ ಶಾಸಕರಿಗೆ ಮಾತ್ರ ಇರೋದಾ?, ನಾವೇನು ಚುನಾವಣೆಯಲ್ಲಿ ಗೆದ್ದಿಲ್ವಾ?. ಮುಖ್ಯಮಂತ್ರಿಗಳು ದ್ವೇಷದ ರಾಜಕೀಯವನ್ನು ಎಷ್ಟು ದಿನ ಮಾಡುತ್ತಾರೆ ಅನ್ನೋದನ್ನು ನೋಡುತ್ತೇನೆ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಸಿಎಂ ವಿರುದ್ಧ ಹರಿಹಾಯ್ದರು.
ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾವೇರಿ ಪ್ರಾಧಿಕಾರ ಕೇವಲ ಬಿಜೆಪಿಗೆ ಮಾತ್ರ ಸೇರಿದೆಯಾ?. ಅವರ ಪಕ್ಷದ ಶಾಸಕರುಗಳ ಕ್ಷೇತ್ರಕ್ಕೆ ಮಾತ್ರ ಹಣ ಬಿಡುಗಡೆ ಮಾಡಿ, ಹಾಸನ ಜಿಲ್ಲೆಗೆ ಅನ್ಯಾಯ ಮಾಡಲಾಗ್ತಿದೆ. ಎಸ್.ಸಿ.ಪಿ.ಗೆ ಮೀಸಲಿಟ್ಟ ಹಣವನ್ನು ನೀರಾವರಿ ಅಚ್ಚುಕಟ್ಟು ಪ್ರದೇಶಗಳಿಗೆ ನೀಡಬೇಕು. ಅದನ್ನು ಬಿಟ್ಟು ಬೇರೆ ಪ್ರದೇಶಗಗಳಿಗೆ ನೀಡಿ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ. ಈ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಸಕಲೇಶಪುರಕ್ಕೆ ಎಸ್.ಸಿ.ಪಿ. ಹಣ ನೀಡದೆ ಬೇರೆಡೆಗೆ ನೀಡಿದ್ದಾರೆ. ಸಿಎಂ ಬಳಿಯೇ ನೀರಾವರಿ ಖಾತೆ ಇದ್ದು, ಈ ಇಲಾಖೆಯಲ್ಲಿ ಲೂಟಿ ನಡೆಯುತ್ತಿದೆ. ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೂ ಹಣ ಕೊಟ್ಟಿದ್ದಾರೆ. ವಿಶೇಷ ಘಟಕ ಯೋಜನೆಯಡಿ ಹಾಸನಕ್ಕೆ 2 ಕೋಟಿ, ಶ್ರವಣಬೆಳಗೊಳ, ಬೇಲೂರು, ಸಕಲೇಶಪುರಕ್ಕೆ ತಲಾ ಒಂದುವರೆ ಕೋಟಿ ರೂ. ಗಳಂತೆ ಕೊಡಲಾಗಿದೆ. ಆ ಭಾಗದಲ್ಲಿ ಎಲ್ಲಿ ಕಾವೇರಿ ನಿಗಮ ಬರುತ್ತದೆ?, ಆದರೂ ಅಲ್ಲಿಗೆ ಎಂಟು ಕೋಟಿ ರೂ. ಕೊಟ್ಟಿದ್ದಾರೆ. ನೀರಾವರಿ ಹಾಗೂ ಲೋಕೋಪಯೋಗಿ ಇಲಾಖೆಯಲ್ಲಿ ಬೇಕಾ ಬಿಟ್ಟಿ ಹಣ ಖರ್ಚು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಹಣ ಕೊಡುವವರಿಗೆ ಎನ್ಓಸಿ ಕೊಡುತ್ತಿದ್ದಾರೆ. ಹಣಕಾಸು ಮತ್ತು ನೀರಾವರಿ ಎರಡು ಇಲಾಖೆಗೆ ಮುಖ್ಯಮಂತ್ರಿಗಳೇ ಮಂತ್ರಿಗಳಾಗಿದ್ದಾರೆ. ಶಾಸಕರಿಗೆ ಭಿಕ್ಷೆ ಕೊಟ್ಟ ಹಾಗೆ ಅನುದಾನ ಕೊಡಲಾಗುತ್ತಿದ್ದು, ನಾವೇನು ಭಿಕ್ಷಕರೇ?, ಕೂಡಲೇ ಸರಿಪಡಿಸಿಕೊಳ್ಳಬೇಕು. ಹೀಗೆ ಮುಂದುವರೆಸಿದರೆ ಮುಂದಿನ ದಿನಗಳಲ್ಲಿ ತೀವ್ರವಾದ ಹೋರಾಟ ಮಾಡಲಾಗುವುದು. ಈ ಬಗ್ಗೆ ವಿಧಾನಸಭೆ ಅಧಿವೇಶನದಲ್ಲಿ ಚರ್ಚಿಸುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದರು.