ಹಾಸನ : ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರನ್ನು ಕೇವಲ 10 ತಿಂಗಳಲ್ಲಿ ಅಧಿಕಾರದಿಂದ ಕೆಳಗಿಳಿಸಿದ್ರಲ್ಲ ಆ ಶಾಪವೇ ಇವತ್ತು ಕಾಂಗ್ರೆಸ್ ದೇಶಾದ್ಯಂತ ಸರ್ವನಾಶ ಆಗಲು ಕಾರಣ ಎಂದು ಹೆಚ್ ಡಿ ರೇವಣ್ಣ ವಾಗ್ದಾಳಿ ನಡೆಸಿದರು.
ಹಾಸನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಕಾಂಗ್ರೆಸ್ನವರ ಮನೆ ಬಾಗಿಲಿಗೆ ಹೋಗಿರಲಿಲ್ಲ, ಅವರೇ ನಮ್ಮ ಮನೆ ಬಾಗಿಲಿಗೆ ಬಂದಿದ್ದರು.
ಇಂದು ನಮಗೆ ಈ ಪರಿಸ್ಥಿತಿ ಬಂದಿದೆ ಅಂದ್ರೆ ಅದಕ್ಕೆ ಕಾಂಗ್ರೆಸ್‌ನವರು ನಮ್ಮ ಮನೆ ಬಾಗಿಲಿಗೆ ಬಂದಿದ್ದೇ ಕಾರಣ.
ಅವರೇ ಬಂದು ಕುಮಾರಣ್ಣನವ್ರೇ ನೀವು ಮುಖ್ಯಮಂತ್ರಿಯಾಗಿ, ದೇವೇಗೌಡ್ರೆ ನಿಮ್ಮ ಮಗನನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂದು ಕಾಲಿಗೆ ಬಿದ್ದು ನಮಸ್ಕಾರ ಮಾಡಿದರು.
ಕೇವಲ 14 ತಿಂಗಳಲ್ಲಿ ಕೆಳಗಿಳಿಸಿ ಅನ್ಯಾಯ ಮಾಡಿದ್ರಲ್ಲ, ಅಂತಹವರ ಜೊತೆ ಕುಮಾರಣ್ಣ ಹೋಗಿದ್ದೆ ತಪ್ಪಾಯ್ತು ಎಂದು ವ್ಯಂಗ್ಯವಾಗಿ ಮಾತನಾಡಿದರು.
ಮೈತ್ರಿ ಸರ್ಕಾರ ಮುರಿದ ಎರಡೇ ದಿನದಲ್ಲಿ ಮೋದಿಯವರು ನೀವು ರಾಜೀನಾಮೆ ಕೊಟ್ಟು ಬನ್ನಿ ಮತ್ತೆ ನಿಮಗೆ ಅದೇ ಸೀಟ್ ಕೊಡುತ್ತೇವೆ ಎಂದರು. ಆಂತಹ ಪಾಪದ ಕೆಲಸಕ್ಕೆ ನಾವು ಕೈ ಹಾಕಲಿಲ್ಲ. ಈಗ ಕಾಂಗ್ರೆಸ್‌ನವರು ನಮ್ಮ ಜೊತೆ ಸಹವಾಸ ಬೇಡ ಎನ್ನುತ್ತಿದ್ದಾರೆ.
ನಾನು ಅವರಲ್ಲಿ ಕೇಳುವುದು ಒಂದೇ, ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಮಾಡುತ್ತೇನೆ ಎಂದು ವರಿಷ್ಠರು ಹೇಳಲಿ, ಆವಾಗ ಒಪ್ಪಿಕೊಳ್ಳುತ್ತೇನೆ ಎಂದು ಸವಾಲು ಹಾಕಿದರು.
ಚುನಾವಣೆ ಸಂದರ್ಭದಲ್ಲಿ 'ಎ'ಟೀಂ 'ಬಿ'ಟೀಂ ಎಂದರು. ಇವತ್ತು ಎರಡು ರಾಷ್ಟ್ರೀಯ ಪಕ್ಷಗಳು ಸಿಡಿ ವಿಚಾರದಲ್ಲಿ ಕಚ್ಚಾಡುತ್ತಿವೆ. ಬಿಜೆಪಿಯವರು ಈ ಸಿಡಿಯನ್ನು ಕಾಂಗ್ರೆಸ್‌ನವರು ತಯಾರಿಸಿದ್ದಾರೆ ಎನ್ನುತ್ತಾರೆ.
ಕಾಂಗ್ರೆಸ್ಸಿನವರು ಕೋಮುವಾದಿ ಪಕ್ಷವನ್ನು ಮುಗಿಸುತ್ತೇವೆ ಎನ್ನುತ್ತಾರೆ. ಕೋಮುವಾದಿ ಪಕ್ಷ ಎನ್ನುವ ಕಾಂಗ್ರೆಸ್ ತುಮಕೂರು ಹಾಗೂ ಮಂಡ್ಯದಲ್ಲಿ ಕೋಮುವಾದಿಗಳೊಂದಿಗೆ ಸೇರಿ ದೇವೇಗೌಡರನ್ನು ಹಾಗೂ ಕುಮಾರಣ್ಣನ ಮಗನನ್ನು ಮುಗಿಸಿದರು. ಅವರಿಗೆ ನಮ್ಮ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆ ಎಲ್ಲಿದೆ ಎಂದು ಹರಿಹಾಯ್ದರು.