ಹಾಸನ: ಮೈಸೂರು ಕರ್ನಾಟಕ ಭಾಗದ ಬಿಜೆಪಿ ಬಲಗೊಳಿಸಲು ನಾಯಕರು ಕಸರತ್ತು ನಡೆಸುತ್ತಿದ್ದಾರೆ. ಇದರ ಮೊದಲ ಹಂತವಾಗಿ ಶ್ರವಣಬೆಳಗೊಳದ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ನಾಯಕ ಸಿ.ಎಸ್.ಪುಟ್ಟೇಗೌಡರನ್ನು ಪಕ್ಷಕ್ಕೆ ಕರೆತರುವ ಪ್ರಯತ್ನ ನಡೆಯುತ್ತಿದೆ.
ಮಲೆನಾಡು ಭಾಗದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಸಚಿವ ಮಾಧುಸ್ವಾಮಿ ಮತ್ತು ಸ್ಥಳೀಯ ಶಾಸಕ ಪ್ರೀತಂಗೌಡ, ಸಿಎಸ್ ಪುಟ್ಟೇಗೌಡ ಮನೆಗೆ ಭೇಟಿ ನೀಡಿ ಅಚ್ಚರಿ ಮೂಡಿಸಿದ್ದರು. ಈ ವೇಳೆ ಮಾಧ್ಯಮದವರನ್ನು ಹೊರಗಿಟ್ಟು ಕಾರ್ಯಕರ್ತರ ಜೊತೆ ಬಿಜೆಪಿಯ ಸೇರ್ಪಡೆ ಬಗ್ಗೆ ದೀರ್ಘ ಸಮಾಲೋಚನೆ ನಡೆಸಿದ್ದಾರೆ. ಜೊತೆಗೆ ಹೊಳೆನರಸೀಪುರ ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಅನುಪಮ ಮತ್ತು ದಂಡಿಗನಹಳ್ಳಿ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯ ಶ್ರೇಯಸ್ ಪಟೇಲ್, ಸೇರಿದಂತೆ ಜಿಲ್ಲೆಯ ಹಲವು ಮುಖಂಡರುಗಳನ್ನು ಪಕ್ಷಕ್ಕೆ ಸೆಳೆಯಲು ಬಿಜೆಪಿ ಹೊಸ ತಂತ್ರ ಹೆಣೆದಿದೆ.
ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ಕಣಕ್ಕಿಳಿಯುವುದು ಬಹುತೇಕ ಮೂಲ ಕಾಂಗ್ರೆಸ್ಸಿಗರಿಗೆ ಇಷ್ಟವಿರಲಿಲ್ಲ. ಆದ್ದರಿಂದ ಅವರೆಲ್ಲಾ ಮೈತ್ರಿ ಅಭ್ಯರ್ಥಿಗೆ ಮತ ನೀಡದೆ ಬಿಜೆಪಿಯನ್ನು ಬೆಂಬಲಿಸಿದ್ದರು ಎಂದೇ ಹೇಳಲಾಗಿತ್ತು. ಆದ್ರೆ, ಚನ್ನರಾಯಪಟ್ಟಣ, ಅರಸೀಕೆರೆ, ಸಕಲೇಶಪುರ, ಹೊಳೆನರಸಿಪುರ ಭಾಗದಲ್ಲಿ ತೀವ್ರ ವಿರೋಧದ ನಡುವೆಯೂ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಗೆದ್ದಿದ್ದರು. ಈ ಬೆನ್ನಲ್ಲೇ ಸಮಿಶ್ರ ಸರ್ಕಾರ ಕೂಡ ಪತನವಾಗಿದೆ. ಸದ್ಯ ಪಕ್ಷದ ಬಗ್ಗೆ ಅಸಮಧಾನವಿರುವ ಕಾಂಗ್ರೆಸ್ಸಿಗರು ಅವರನ್ನು ಸಂಪೂರ್ಣವಾಗಿ ಬಿಜೆಪಿಗೆ ಸೇರ್ಪಡೆ ಮಾಡುವ ಪ್ರಯತ್ನದಲ್ಲಿ ನಡೆಸುತ್ತಿದ್ದಾರೆ.
ಪುಟ್ಟೇಗೌಡ ಏನು ಹೇಳಿದ್ರು?
ನನ್ನ ಬೆಂಬಲಿಗರ ಸಭೆ ಕರೆದು ವಿಚಾರ ಮಂಡಿಸಿ, ಅವರ ಅಭಿಪ್ರಾಯ ಪಡೆದು ಅಂತಿಮ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಸಿ.ಎಸ್ ಪುಟ್ಟೇಗೌಡ ಭರವಸೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.