ಹಾಸನ : ಚಲಿಸುತ್ತಿದ್ದ ವಾಹನಕ್ಕೆ ಆಕಸ್ಮಿಕ ಬೆಂಕಿ ಹೊತ್ತಿಕೊಂಡ ಹಿನ್ನೆಲೆ ದ್ವಿಚಕ್ರ ವಾಹನ ಸಂಪೂರ್ಣ ಸುಟ್ಟು ಕರಕಲಾದ ಘಟನೆ ಹಾಸನದ ಎಂಜಿರಸ್ತೆಯಲ್ಲಿ ನಡೆದಿದೆ.
ಬೆಂಕಿ ಹೊತ್ತಿಕೊಂಡ ತಕ್ಷಣ ವಾಹನವನ್ನು ನಿಲ್ಲಿಸಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಹಾಸನದ ಎಂಸಿಎಫ್ (ಇಸ್ರೋ)ನಲ್ಲಿ ಉದ್ಯೋಗಿಯಾಗಿರುವ ಸಂಜೀವ್ ಗಾರ್ ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದರು. ಮನೆಯಿಂದ ದಿನಸಿ ತರಲೆಂದು ಮಾರುಕಟ್ಟೆಗೆ ಹೋಗುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಬೆಂಕಿ ಕಾಣಿಸಿದ ಹಿನ್ನೆಲೆಯಲ್ಲಿ ಸ್ಥಳೀಯರು ಕೊಡದಲ್ಲಿ ನೀರನ್ನ ತಂದು ಬೆಂಕಿ ನಂದಿಸುವ ಕಾರ್ಯ ಮಾಡಿದರು. ಆದರೂ ಬೆಂಕಿ ನಂದಿಸಲಾಗದ ಕಾರಣ ದ್ವಿಚಕ್ರ ವಾಹನ ಸುಟ್ಟು ಕರಕಲಾಗಿದೆ. ವಿಚಾರ ತಿಳಿದ ಬಳಿಕ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲಿಸಿದ್ದಾರೆ. ಹಾಸನದ ಬಡಾವಣೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.