ಹಾಸನ: ಫೋನ್ ಕದ್ದಾಲಿಕೆ ಪ್ರಕರಣ ಸಾಬೀತಾಗಿದ್ದು, ಇದನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಿಬಿಐಗೆ ವಹಿಸಿರೋದು ಸ್ವಾಗತಾರ್ಹ. ಆದ್ರೆ ಈ ಪ್ರಕರಣದಲ್ಲಿ ಭಾಗಿಯಾಗಿರುವವರ ವಿರುದ್ಧ ಕೂಡಲೇ ಎಫ್‌ಐಆರ್ ದಾಖಲಿಸಬೇಕೆಂದು ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಎ.ಮಂಜು ಆಗ್ರಹಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದ ಅವರು, ಇಂದು ಗಂಡ- ಹೆಂಡತಿಯ ಫೋನ್ ಕದ್ದಾಲಿಕೆ ಮಾಡುವುದೇ ಕಾನೂನು ಭಾಹಿರ. ಹಾಗಿರುವಾಗ ನನ್ನನ್ನು ಒಳಗೊಂಡಂತೆ ಸ್ವತಃ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹಾಗೂ ರಾಹುಲ್ ಗಾಂಧಿ ಆಪ್ತ ಸಹಾಯಕರ ಫೋನನ್ನೇ ಕದ್ದಾಲಿಕೆ ಮಾಡಲಾಗಿದೆ ಎಂದು ದೂರಿದರು.
ಈ ಹಿಂದೆ ರಾಮಕೃಷ್ಣ ಹೆಗಡೆ ಸಿಎಂ ಆಗಿದ್ದಾಗ ಫೋನ್ ಕದ್ದಾಲಿಕೆಯಾಗಿತ್ತು. ಆಗ ದೇವೇಗೌಡರು ಭಾರಿ ಹೋರಾಟ ಮಾಡಿ ಹೆಗಡೆ ಅವರನ್ನ ರಾಜೀನಾಮೆ ಕೊಡಿಸಿದ್ರು. ಆದ್ರೇ ಈಗ ಅವರ ಮಗನೇ ಫೋನ್ ಕದ್ದಾಲಿಕೆ ಮಾಡಿಸಿದ್ದಾರೆ. ಈಗ ಸ್ವತಃ ಗೌಡರೇ ತಮಗೆ ಗೊತ್ತಿಲ್ಲವೆಂದು ನುಣುಚಿಕೊಳ್ಳುತ್ತಿದ್ದಾರೆ ಎಂದು ಮಂಜು ವಾಗ್ದಾಳಿ ನಡೆಸಿದ್ರು.