ಹಾಸನ: ಪೌರತ್ವ ತಿದ್ದುಪಡಿ ಕಾಯಿದೆ ಜಾರಿ ವಿರೋಧಿಸಿ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಶಾಂತಿಯುತವಾಗಿ ಹೋರಾಟ ನಡೆಸುತ್ತಿದ್ದ ವೇಳೆ ಅಲ್ಲಿನ ಪೊಲೀಸ್ ಮತ್ತು ಸಿಆರ್‌ಪಿ ಪಡೆಗಳು ಪ್ರತಿಭಟನಗಾರರ ಮೇಲೆ ಹಲ್ಲೆ ನಡೆಸಿರುವುದನ್ನು ಖಂಡಿಸಿ ಎಸ್ಎಫ್ಐ ಮತ್ತು ಡಿವೈಎಫ್‌ಐ ನೇತೃತ್ವದಲ್ಲಿ ಹೇಮಾವತಿ ಪ್ರತಿಮೆ ಬಳಿ ಪ್ರತಿಭಟನೆ ನಡೆಯಿತು.
ಭಾರತ ಸಂವಿಧಾನದಲ್ಲಿ ಜಾತ್ಯಾತೀತ ಅಂಶಗಳಿಗೆ ಅಡ್ಡಿಪಡಿಸುವ ರೀತಿ ಪೌರತ್ವ ಕಾಯ್ದೆ ತಿದ್ದುಪಡಿ ಮಾಡಲು ಹೊರಟಿರುವುದನ್ನು ವಿರೋಧಿಸಿದರು. ಇದು ದೇಶದ ಸಂವಿಧಾನದ ವಿರುದ್ಧವಾಗಿ ನಡೆಯುತ್ತಿರುವ ಪ್ರಕ್ರಿಯೆವಾಗಿದೆ. ಅಮಿತ್ ಶಾ ಮತ್ತು ಮೋದಿ ಸರ್ಕಾರ ಅತ್ಯಂತ ಜನ ವಿರೋಧಿ, ಕಾನೂನು ತರಲು ಹೊರಟಿದೆ, ದೆಹಲಿಯಲ್ಲಿ ಮಸೂದೆ ಖಂಡಿಸಿ ನಡೆಯುತ್ತಿರುವ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದು ಹೇಳಿದರು.
ಈ ಮಸೂದೆಯನ್ನು ಲೋಕಸಭೆ ಭಾರಿ ಬಹುಮತದಿಂದ ಹಾಗೂ ರಾಜ್ಯ ಸಭೆಯಲ್ಲಿಯೂ ಕೂಡ ಮಂಜೂರು ಮಾಡಿವೆ. ಆದರೆ, ಇದರ ವಿರುದ್ಧ ತೀವ್ರ ಅತೃಪ್ತಿ ಹೊಗೆಯಾಡುತ್ತಿದೆ. ಈ ಮಸೂದೆಯನ್ನು ಲೋಕಸಭೆ, ರಾಜ್ಯ ಸಭೆಯಲ್ಲಿ ಮಂಜೂರು ಮಾಡುತ್ತಿರುವಾಗ, ಈಶಾನ್ಯ ಭಾರತದ ವಿದ್ಯಾರ್ಥಿಗಳು 11 ಗಂಟೆಗಳ ಬಂದ್ ಆಚರಿಸುತ್ತಿದ್ದರು.
ಭಾರತದ ನಾಗರಿಕರ ರಾಷ್ಟ್ರೀಯ ನೋಂದಣಿಯನ್ನು ದೇಶಾದ್ಯಂತ ಜಾರಿಗೊಳಿಸವ ಮೂಲಕ ದಾಖಲೆಗಳನ್ನು ಒದಗಿಸಲಾಗದ ಭಾರತೀಯ ಅಲ್ಪಸಂಖ್ಯಾರನ್ನು ಅಕ್ರಮ ವಲಸಿಗರೆಂದು ಘೋಷಿಸಿ, ಅವರ ಪೌರತ್ವವನ್ನು ರದ್ದುಗೊಳಿಸುವ ಮತ್ತು ಅವರನ್ನು ವಲಸಿಗರು ಕ್ಯಾಂಪ್ಗಳಿಗೆ ತಳ್ಳುವ ಹುನ್ನಾರವಿದೆ ಎಂದು ಕಿಡಿಕರಿದರು.