ಅರಕಲಗೂಡು: ರೈತರು ಬೆಳೆದ ಬೆಳೆಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದರೂ ಕ್ಷೇತ್ರದ ಶಾಸಕ ಎ.ಟಿ. ರಾಮಸ್ವಾಮಿ ಮತ್ತು ಸಂಸದ ಪ್ರಜ್ವಲ್ ರೇವಣ್ಣ ತಲೆಕೆಡಿಸಿಕೊಳ್ಳದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ರೈತ ಸಂಘದ ಮುಖಂಡ ಜಗದೀಶ್ ಆರೋಪಿಸಿದ್ದಾರೆ.
ಗೊಬ್ಬಳಿ ಕಾವಲು ಹಾಗೂ ಹೊನಗನಹಳ್ಳಿ ಗ್ರಾಮದಲ್ಲಿ ಕೆಟ್ಟು ಹೋಗಿರುವ ವಿದ್ಯುತ್ ಪರಿವರ್ತಕ ಸರಿಪಡಿಸಲು ಒತ್ತಾಯಿಸಿ ರೈತರು ಇಂದು ರಾಮನಾಥಪುರ ಸೆಸ್ಕ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಸಂದರ್ಭದಲ್ಲಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಆರು ತಿಂಗಳಿಂದ ಟಿಸಿ ಕೆಟ್ಟಿದ್ದು ಸರಿಪಡಿಸಲು ಮನವಿ ಮಾಡಿದರೂ ಸೆಸ್ಕ್ನವರು ತಲೆಕೆಡಿಸಿಕೊಳ್ಳುತ್ತಿಲ್ಲ. ಪರಿಣಾಮವಾಗಿ ಬೆಳೆದ ಬೆಳೆಗಳು ಒಣಗಿ ನಾಶವಾಗುತ್ತಿದೆ. ಅಲ್ಲದೇ ನಿತ್ಯವೂ ಸೆಸ್ಕ್ ಕಚೇರಿಗೆ ಅಲೆಯುವುದೇ ಆಗಿದೆ, ಚೆಕ್ಪೋಸ್ಟ್ನಲ್ಲಿ ಪೊಲೀಸರು ಒಳಬಿಡುತ್ತಿಲ್ಲ. ಇಂದು ಕಚೇರಿ ಒಳಗೂ ಬಿಡದೇ ಬೀಗ ಹಾಕಲಾಗಿದ್ದು ನಮ್ಮ ಕಷ್ಟ ಆಲಿಸುವವರೇ ಇಲ್ಲವಾಗಿದ್ದಾರೆಂದು ರೈತರು ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ.
ರೈತರು ಸಾಲ ಮಾಡಿ ಬೆಳೆದ ಬೆಳೆಗಳು ಒಣಗಿ ಹಾಳಾಗುತ್ತಿವೆ, ಈಗ ಲಾಕ್ಡೌನ್ನಿಂದಾಗಿ ಅಲ್ಪಸ್ವಲ್ಪ ಬೆಳೆದ ಬೆಳೆಗಳನ್ನು ಸಾಗಿಸಲು ಆಗುತ್ತಿಲ್ಲ. ಕ್ಷೇತ್ರದ ಶಾಸಕರು ಮತ್ತು ಸಂಸದರು ರೈತರ ಸಮಸ್ಯೆಗೆ ಸ್ಪಂದಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ. ರೈತರ ಬೆಳೆಗಳನ್ನು ಖರೀದಿಸಿ ಆರ್ಥಿಕ ಸಂಕಷ್ಟಕ್ಕೆ ಸ್ಪಂದಿಸದಿದ್ದರೆ ಆತ್ಮಹತ್ಯೆ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.