ಹಾಸನ:ಖೋಟಾ ನೋಟು ಜಾಲವೊಂದನ್ನು ಬಯಲಿಗೆಳೆದಿರುವ ಗ್ರಾಮಾಂತರ ಠಾಣೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ನೋಟು ಮುದ್ರಣಕ್ಕೆ ಬಳಸುತ್ತಿದ್ದ ಉಪಕರಣ ಹಾಗೂ ಇತರೆ ವಸ್ತುಗಳನ್ನು ಕೂಡ ವಶಪಡಿಸಿಕೊಂಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ನೆಲ್ಯಾಡಿ ಗ್ರಾಮದ ಇಲಿಯಾಸ್, ಸುಲೈಮಾನ್, ಕೆಆರ್‌ನಗರ ತಾಲೂಕು ಬೆಟ್ಟಗಾನಹಳ್ಳಿ ಕಿರಣ್ ಹಾಗೂ ಹನುಮನಹಳ್ಳಿ ಸಂತೋಷ್ ಬಂಧಿತ ಆರೋಪಿಗಳು. ಮಾರುತಿ ಒಮಿನಿ ವಾಹನದಲ್ಲಿ ಮಂಗಳೂರಿಗೆ ತೆರಳುತ್ತಿದ್ದ ಆರೋಪಿಗಳು, ತಾಲೂಕಿನ ಮಾರನಹಳ್ಳಿ ಗ್ರಾಮದ ಹೊರ ಠಾಣೆಯ ಸಮೀಪ ವಾಹನಗಳ ದಾಖಲೆ ತಪಾಸಣೆ ನಡೆಸುತ್ತಿದ್ದ ಗ್ರಾಮಾಂತರ ಠಾಣೆ ಪೊಲೀಸರ ಕೈಗೆ ಸಿಕ್ಕಿದ್ದಾರೆ. ವಾಹನ ದಾಖಲೆ ನೀಡಲು ಹಿಂದೇಟು ಹಾಕಿದ ಆರೋಪಿಗಳು ವಾಹನ ಬಿಟ್ಟು ಪರಾರಿಯಾಗಲು ಯತ್ನಿಸಿದ್ದಾರೆ ಎನ್ನಲಾಗಿದೆ.
ಅನುಮಾನಗೊಂಡ ಪೊಲೀಸರು ವಾಹನ ತಪಾಸಣೆ ಮಾಡಿದಾಗ, ಡ್ಯಾಷ್ ಬೋರ್ಡ್‌ನಲ್ಲಿ ಒಂದೇ ಕ್ರಮ ಸಂಖ್ಯೆಯ 500 ರೂಪಾಯಿಯ 3 ನೋಟುಗಳು ಪತ್ತೆಯಾಗಿವೆ. ಆರೋಪಿಗಳನ್ನು ಹಿಡಿದು ತಪಾಸಣೆಗೊಳಪಡಿಸಿದ ನಂತರ, ಅವರ ಬಳಿ ಇದ್ದ ₹2000 ಮುಖ ಬೆಲೆಯ 2 ಹಾಗೂ ₹100 ಮುಖ ಬೆಲೆಯ 15 ಖೋಟಾ ನೋಟುಗಳಿದ್ದವು. ಒಟ್ಟು 13 ಸಾವಿರ ರೂಪಾಯಿ ನಕಲಿ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ.
ಇದಕ್ಕೂ ಮೊದಲು ಆರೋಪಿಗಳು ದೋಣಿಗಾಲ್ ಗ್ರಾಮ ಸಮೀಪದ ಅಂಗಡಿಯೊಂದರಲ್ಲಿ 2000 ರೂಪಾಯಿ ಖೋಟಾ ನೋಟು ನೀಡಿ, ಸಿಗರೇಟ್ ಖರೀದಿಸಿದ್ದಾರೆ. ಮಾರನಹಳ್ಳಿ ಹೋಟೆಲ್ ಒಂದರಲ್ಲಿ ಊಟ ಮಾಡಿ ₹2000 ಖೋಟಾ ನೋಟು ನೀಡಿ ಚಿಲ್ಲರೆ ಪಡೆದಿದ್ದರು ಎನ್ನುವ ಅಂಶ ತನಿಖೆಯಿಂದ ಬಯಲಿಗೆ ಬಂದಿದೆ. ಆರೋಪಿ ಕಿರಣ್ ಮನೆಯ ಮೇಲೆ ದಾಳಿ ಮಾಡಿದ ಪೊಲೀಸರು, ನೋಟು ತಯಾರಿಕೆಗೆ ಬಳಸುತ್ತಿದ್ದ ಉಪಕರಣಗಳನ್ನು ವಶಕ್ಕೆ ಪಡೆದಿದ್ದಾರೆ.