ಹಾಸನ: ಭಾರತ, ಚೀನಾ ಗಡಿಯಲ್ಲಿ ಉಂಟಾಗಿರುವ ಸಂಘರ್ಷಕ್ಕೆ ಸಬಂಧಿಸಿದಂತೆ ದೇಶ ರಕ್ಷಣೆಯನ್ನು ಪ್ರಧಾನ ಮಂತ್ರಿ ಹಾಗೂ ರಕ್ಷಣಾ ಸಚಿವರು ನೋಡಿಕೊಳ್ಳುತ್ತಾರೆ. ನಾನು ಗಡಿ ಬಗ್ಗೆ ಮಾತನಾಡುವಷ್ಟು ದೊಡ್ಡವನಲ್ಲ ಎಂದು ಮಾಜಿ ಸಚಿವ ಎಚ್. ಡಿ. ರೇವಣ್ಣ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಬಳಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ದೇಶದ ವಿಚಾರ ಬಂದಾಗ ಪಕ್ಷಬೇಧ ಮರೆತು ಎಲ್ಲರೂ ಒಗ್ಗಟ್ಟಾಗಿ ದೇಶದ ರಕ್ಷಣೆ ಮಾಡಬೇಕು. ದೇಶಕ್ಕಾಗಿ ಹುತಾತ್ಮರಾದ 20 ಮಂದಿ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಕನಿಷ್ಠ 50 ಲಕ್ಷ ರೂ. ಹಾಗೂ ನಿವೇಶನ ಮತ್ತು ಕುಟುಂಬ ಸದಸ್ಯರಿಗೆ ಸರ್ಕಾರಿ ನೌಕರಿ ನೀಡಬೇಕು ಎಂದು ಮನವಿ ಮಾಡುತ್ತೇನೆ ಎಂದರು.
ಮಾಫಿಯಾದವರಿಗೆ ಅನುಕೂಲ :
ರಾಜ್ಯ ಸರ್ಕಾರ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ತಂದಿದ್ದು, ಇದು ರೈತರನ್ನು ಒಕ್ಕಲೆಬ್ಬಿಸುವ ಕಾಯ್ದೆ. ಲ್ಯಾಂಡ್ ಮಾಫಿಯಾ, ರಿಯಲ್ ಎಸ್ಟೇಟ್ ಮತ್ತು ಕಾರ್ಪೊರೇಟ್ ಕಂಪನಿಗಳಿಗೆ ಲಾಭ ಮಾಡುವ ಕಾಯ್ದೆ. ಮುಖ್ಯ ಮಂತ್ರಿ ಯಡಿಯೂರಪ್ಪ ಹಾಗೂ ಕಂದಾಯ ಇಲಾಖೆ ಸಚಿವರು ಈ ಬಗ್ಗೆ ಗಮನ ಹರಿಸಬೇಕು ಎಂದು ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.