ಹಾಸನ: ಬಡವರ ಸುಲಿಗೆ ಮಾಡುವ ಕೆಲ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಹೇಳಿದ್ದ ಕಾರಣಕ್ಕೆ ನನ್ನ ವಿರುದ್ಧ ಪುತ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಈ ಕಂಪ್ಲೇಂಟ್ಗೆ ಹೆದರಿ ನಾನು ಓಡಿ ಹೋಗುವುದಿಲ್ಲ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದರು.
ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೋವಿಡ್ ಸಂಕಷ್ಟದ ಕಾಲದಲ್ಲಿ ಕೆಲ ಖಾಸಗಿ ಆಸ್ಪತ್ರೆಗಳು ಜನರ ರಕ್ತ ಹೀರುತ್ತಿವೆ. ಅದನ್ನು ನೋಡಿಕೊಂಡು ಸುಮ್ಮನೆ ಕೂರಲು ಆಗುವುದಿಲ್ಲ. ನಾನು ವೈದ್ಯರ ಮನಸ್ಸಿಗೆ ನೋವಾಗುವಂತೆ ಮಾತನಾಡಿಲ್ಲ. ಒಳ್ಳೆಯ ಕೆಲಸ ಮಾಡುವ ಆಸ್ಪತ್ರೆಗಳ ಬಗ್ಗೆಯೂ ಮಾತನಾಡಿದ್ದೇನೆ.
ಹಾಸನದ ಖಾಸಗಿ ಆಸ್ಪತ್ರೆಗಳ ಕುರಿತು ಮಾತನಾಡಿದ್ದೇನೆಯೇ ಹೊರತು, ಪುತ್ತೂರು ವೈದ್ಯರ ಬಗ್ಗೆ ಅಲ್ಲ. ವೈದ್ಯರೇ ನನ್ನ ವಿರುದ್ಧ ದೂರು ನೀಡಬಹುದಿತ್ತು. ಆದರೆ, ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ನ ದೌರ್ಜನ್ಯ ತಡೆ ಸಮಿತಿ ರಾಜ್ಯ ಶಾಖೆ ಅಧ್ಯಕ್ಷ ಡಾ.ಗಣೇಶ್ ಪ್ರಸಾದ್ ಮುದ್ರಜಿ ಅವರಿಂದ ದೂರು ಕೊಡಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: ಖಾಸಗಿ ಆಸ್ಪತ್ರೆಯಲ್ಲಿ ಹಣ ವಸೂಲಿ ದಂಧೆ ನಡೆಯುತ್ತಿದೆ, ಇದಕ್ಕೆ ಕಡಿವಾಣ ಹಾಕಿ : ಹೆಚ್ ಡಿ ರೇವಣ್ಣ
ನಾನು ಮಾಡಿರುವ ಆರೋಪ ಸುಳ್ಳು ಎಂದು ಜನರು ಹೇಳಿದ್ರೆ, ಈಗಲೇ ಖಾಸಗಿ ಆಸ್ಪತ್ರೆಗಳ ಕ್ಷಮೆ ಕೇಳುತ್ತೇನೆ. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಜಿಲ್ಲೆಯ ಖಾಸಗಿ ಆಸ್ಪತ್ರೆಗಳ ಆಡಿಟ್ ಮಾಡಿಸಲಿ. ಯಾರು ತಪ್ಪು ಮಾಡಿದ್ದರೂ ಕ್ರಮ ಕೈಗೊಳ್ಳಲಿ. ನಾನು ಶಾಸಕನಾಗಿ ಕೋವಿಡ್ ಚಿಕಿತ್ಸೆಗೆ ನಾಲ್ಕು ಪಟ್ಟು ವಸೂಲಿ ಮಾಡುತ್ತಿದ್ದರೂ ನೋಡಿಕೊಂಡು ಸುಮ್ಮನೆ ಕೂರೋಕಾಗಲ್ಲ.
ಕೋವಿಡ್ ನಿರ್ವಹಣೆ ಹಾಗೂ ಹಣಕಾಸು ಸ್ಥಿತಿ ಕುರಿತು ಚರ್ಚಿಸಲು ವಿಧಾನಸಭಾ ಅಧ್ಯಕ್ಷರು ಕೂಡಲೇ ವಿಶೇಷ ಅಧಿವೇಶನ ಕರೆಯಬೇಕು. ವರ್ಷದಲ್ಲಿ 120 ದಿನ ಅಧಿವೇಶನ ನಡೆಯಬೇಕು. ಆದರೆ, ಈ ವರ್ಷ ಕೇವಲ 5 ರಿಂದ 6 ದಿನ ಮಾತ್ರವೇ ಅಧಿವೇಶನ ನಡೆದಿದೆ. ಕೂಡಲೇ ಸಲಹಾ ಸಮಿತಿಗಳ ಸಭೆ ಕರೆಯಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳುವಂತೆ 'ಮಹಾ' ಸಿಎಂಗೆ ಶಿವಸೇನೆ ಶಾಸಕನ ಪತ್ರ