ಸಕಲೇಶಪುರ: ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ನಲ್ಲಿ ಒಂಟಿಸಲಗದ ಕಾಟ ಮುಂದುವರೆದಿದ್ದು, ಇದರಿಂದ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರಲ್ಲಿ ಆತಂಕ ಉಂಟಾಗಿದೆ.
ಇಂದು ಮಧ್ಯಾಹ್ನದ ವೇಳೆ ಒಂಟಿಸಲಗ ನಡು ರಸ್ತೆಯಲ್ಲಿ ಸಂಚರಿಸಿ ಮಂಗಳೂರಿನಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಟ್ಯಾಂಕರ್ವೊಂದರ ಹತ್ತಿರ ಹೋಗಿ ಕಾಡಿಗೆ ಸಾಗಿದೆ. ಇದನ್ನು ಬೆಂಗಳೂರಿನಿಂದ ಮಂಗಳೂರು ಕಡೆಗೆ ಹೋಗುವ ಬಸ್ ಪ್ರಯಾಣಿಕರು ವಿಡಿಯೋ ಮಾಡಿರುವುದು ಇದೀಗ ವೈರಲ್ ಆಗಿದೆ. ಮಲೆನಾಡು ಭಾಗದಲ್ಲಿ ದಿನೇ-ದಿನೆ ಕಾಡಾನೆಗಳ ಉಪಟಳ ಹೆಚ್ಚುತ್ತಲೇ ಇದ್ದು, ಕಾಡಾನೆ ಹಾವಳಿ ನಿಯಂತ್ರಿಸುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಹೈರಾಣಾಗಿದ್ದಾರೆ.
ಇದೀಗ ಒಂಟಿ ಸಲಗವೊಂದು ಕಳೆದೆರಡು ತಿಂಗಳಿನಿಂದ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಬೀಡು ಬಿಟ್ಟಿದೆ. ಕಳೆದ ಒಂದು ತಿಂಗಳ ಹಿಂದಷ್ಟೇ ರಾಜಸ್ಥಾನ ಮೂಲದ ಚಾಲಕ ಕಾಡಾನೆ ದಾಳಿಗೆ ಬಲಿಯಾಗಿದ್ದ. ಕಳೆದ ಮೂರು ದಿನಗಳ ಹಿಂದೆ ರೈಲು ಸುರಂಗ ಮಾರ್ಗದೊಳಗೆ ಇದೇ ಆನೆ ಕಾಣಿಸಿಕೊಂಡಿತ್ತು. ಇದೀಗ ಪದೇ ಪದೇ ರಸ್ತೆಗೆ ಕಾಡಾನೆ ಬರುತ್ತಿರುವುದರಿಂದ ಪ್ರತಿದಿನ ವಾಹನ ಸವಾರರು ಆತಂಕದಲ್ಲಿ ಸಂಚರಿಸಬೇಕಿದೆ.
ಕಾಡಾನೆ ಹಾವಳಿಯಿಂದ ನಲುಗಿದ ಜನತೆ:
ತಾಲೂಕಿನಲ್ಲಿ ಕಾಡಾನೆಗಳ ಸಮಸ್ಯೆ ಇರುವುದು ಇಂದು ನಿನ್ನೆಯದಲ್ಲ. ಕಳೆದೆರಡು ದಶಕಗಳಿಂದಲೂ ಕಾಡಾನೆ ಹಾವಳಿಯಿಂದ ಸಕಲೇಶಪುರ-ಆಲೂರು ಭಾಗದ ಜನತೆ ಅಕ್ಷರಶಃ ನಲುಗಿ ಹೋಗಿದ್ದಾರೆ. ಒಂದೆಡೆ 80ಕ್ಕೂ ಹೆಚ್ಚು ಜನರು ಕಾಡಾನೆ ದಾಳಿಗೆ ತುತ್ತಾಗಿದ್ದರೆ, ಮತ್ತೊಂದೆಡೆ ಅಪಾರ ಪ್ರಮಾಣದ ಬೆಳೆ ನಷ್ಟ ಕೂಡ ಸಂಭವಿಸಿದೆ. ಇದಕ್ಕೆ ಸೂಕ್ತ ಪರಿಹಾರವೂ ಸಿಗದೆ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಹೋರಾಟ, ಪ್ರತಿಭಟನೆ ನಡೆಸಿದರೂ ಶಾಶ್ವತ ಪರಿಹಾರ ಕಂಡುಹಿಡಿಯುವಲ್ಲಿ ಎಲ್ಲಾ ಸರ್ಕಾರಗಳು ವಿಫಲವಾಗಿವೆ.
ಕೆಲ ದಿನಗಳ ಹಿಂದೆ ಕಾರು ಹಾಗೂ ಲಾರಿ ಮೇಲೆ ಇದೇ ಒಂಟಿಸಲಗ ದಾಳಿ ಮಾಡಿದ್ದು, ಕೂದಲೆಳೆ ಅಂತರದಲ್ಲಿ ಪ್ರಯಾಣಿಕರು ಪಾರಾಗಿದ್ದರು. ಹೊರ ಜಿಲ್ಲೆಗಳಿಂದ ಈ ಮಾರ್ಗದ ಮೂಲಕ ಪ್ರವಾಸಿ ತಾಣಗಳಿಗೆ ತೆರಳುವವರು ಮಾರ್ಗ ಮಧ್ಯೆ ಪ್ರಕೃತಿ ಸೌಂದರ್ಯ ಸವಿಯಲು ವಾಹನಗಳನ್ನು ನಿಲ್ಲಿಸುತ್ತಾರೆ. ಈ ವೇಳೆ ಕಾಡಾನೆ ದಾಳಿ ಮಾಡುವ ಸಾಧ್ಯತೆ ಹೆಚ್ಚು. ಹಾಗಾಗಿ ಕಾಡಾನೆ ಸ್ಥಳಾಂತರಿಸುವಂತೆ ಪ್ರಯಾಣಿಕರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಕಾಡಾನೆ ದಾಳಿಗೆ ಮತ್ತೊಂದು ಬಲಿ: ಹೆಚ್ಚಿದ ಗ್ರಾಮಸ್ಥರ ಆಕ್ರೋಶ
ಕಾಡಾನೆ ಪ್ರತಿನಿತ್ಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಣಿಸಿಕೊಳ್ಳುತ್ತಿದ್ದರೂ ಅರಣ್ಯ ಇಲಾಖೆ ಮಾತ್ರ ಮೌನವಹಿಸಿದೆ ಎನ್ನುವ ಆರೋಪವಿದೆ. ಒಂಟಿಸಲಗ ಇರುವ ಬಗ್ಗೆ ವಾಹನ ಸವಾರರಿಗೆ ತಿಳಿಸಲು ಒಂದು ಸೂಚನಾ ಫಲಕವನ್ನು ಹಾಕಿಲ್ಲ. ಅಲ್ಲದೇ ಪ್ರಯಾಣಿಕರಿಗೆ ಕಾಡಾನೆ ಇರುವ ಬಗ್ಗೆ ಮಾಹಿತಿಯನ್ನು ಸಹ ನೀಡುತ್ತಿಲ್ಲ. ಕಳೆದ ಒಂದು ತಿಂಗಳ ಹಿಂದೆ ಟ್ಯಾಂಕರ್ ನಿಲ್ಲಿಸಿ ಬಹಿರ್ದೆಸೆಗೆ ತೆರಳಿದ್ದ ರಾಜಸ್ಥಾನ ಮೂಲದ ವಕೀಲ್ ಎಂಬ ಯುವಕ ಇದೇ ಕಾಡಾನೆ ದಾಳಿಗೆ ಬಲಿಯಾಗಿದ್ದ. ಮೀಸಲು ಅರಣ್ಯದೊಳಗೆ ಪ್ರವೇಶ ಮಾಡಿದ್ದ ಎಂದು ಅರಣ್ಯ ಇಲಾಖೆ ಆತನ ಕುಟುಂಬಕ್ಕೆ ನಯಾಪೈಸೆ ಪರಿಹಾರವನ್ನು ನೀಡಿಲ್ಲ. ಬಡ ಕುಟುಂಬಕ್ಕೆ ಪರಿಹಾರ ನೀಡುವಂತೆ ಹಲವು ಸಂಘಟನೆಗಳು ಹೋರಾಟ ಆರಂಭಿಸಿವೆ. ಮತ್ತೊಂದು ಅನಾಹುತ ಸಂಭವಿಸುವ ಮುನ್ನ ಒಂಟಿಸಲಗವನ್ನು ಕಾಡಿಗಟ್ಟುವಂತೆ ಸ್ಥಳೀಯರು ಅಗ್ರಹಿಸಿದ್ದಾರೆ.
ಮದವೇರಿದ ಕಾಡಾನೆ ಗುಂಪಿನಿಂದ ಬೇರ್ಪಟ್ಟು ಮತ್ತೆ ಕಾಡಿಗೆ ತೆರಳಲು ಸಾಧ್ಯವಾಗದೆ ಹೆದ್ದಾರಿ ಪಕ್ಕದಲ್ಲೇ ಬೀಡುಬಿಟ್ಟಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.