ಹಾಸನ: ಜಿಲ್ಲೆಯ ಬೇಲೂರು ತಾಲೂಕಿನ ಗೂರ್ಗಿಹಳ್ಳಿ ಗ್ರಾಮದ ಬಳಿ ಕಾಡಾನೆಯೊಂದರ ಮೃತದೇಹ ಪತ್ತೆಯಾಗಿದೆ. ಸೈಯದ್ ಸತ್ತರೆ ಎಂಬುವರ ತೋಟದ ಸಮೀಪ 15 ವರ್ಷದ ಗಂಡು ಸಲಗ ಮೃತಪಟ್ಟಿದೆ. ಆನೆಯ ಕಣ್ಣಿನ ಭಾಗದಲ್ಲಿ ಗುಂಡಿಕ್ಕಿರುವ ಕುರುಹು ಹಾಗೂ ದೇಹದ ಮೇಲೆ ರಕ್ತಸಿಕ್ತ ಗಾಯದ ಗುರುತುಗಳು ಪತ್ತೆಯಾಗಿದ್ದು, ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಬೇಲೂರು ತಾಲೂಕಿನ ಅರೆಹಳ್ಳಿ ಮಲಸಾವರ ಸುತ್ತಮುತ್ತ ಇತ್ತೀಚೆಗೆ 30ಕ್ಕೂ ಹೆಚ್ಚು ಆನೆಗಳು ಬೀಡು ಬಿಟ್ಟಿವೆ. ಇದರಿಂದ ಕಾಫಿ ತೋಟಕ್ಕೆ ಹೋಗಲು ಕೂಲಿಕಾರ್ಮಿಕರು ಭಯಪಡುವಂತಾಗಿದೆ. ಕೆಲ ದಿನಗಳಿಂದ ಅರಳಿ ಭಾಗದಲ್ಲಿ ಕಾಡಾನೆಗಳಿಗೆ ನಾಲ್ಕು ಮಂದಿ ಕಾರ್ಮಿಕರು ಬಲಿಯಾಗಿದ್ದಾರೆ. ಇದೀಗ ಅದೇ ಭಾಗದಲ್ಲಿ ಕಾಡಾನೆ ಸಾವನ್ನಪ್ಪಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಇತ್ತೀಚೆಗೆ ಆನೆ ಹಾವಳಿ ಅತಿಯಾಗಿರುವ ಹಿನ್ನೆಲೆಯಲ್ಲಿ ಸ್ಥಳಾಂತರ ಮಾಡಬೇಕೆಂದು ಜನರು ಶಾಸಕರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದರು. ಇದರ ಬೆನ್ನಲ್ಲೇ ಕಾಡಾನೆ ಸಾವು ಪ್ರಕರಣ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ದಾರಿಯಲ್ಲಿ ಸಿಕ್ಕ ಚಿನ್ನದ ಸರ ಪೊಲೀಸರಿಗೊಪ್ಪಿಸಿದ ಪ್ರಾಮಾಣಿಕ ಯುವಕ