ಸಕಲೇಶಪುರ: ಕಾಡಾನೆ ದಾಳಿಯಿಂದ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನೋರ್ವ ಸ್ವಲ್ಪದರಲ್ಲೇ ಬಚಾವ್ ಆಗಿರುವ ಘಟನೆ ಇಲ್ಲಿನ ಬಾಳ್ಳುಪೇಟೆಯಲ್ಲಿ ನಡೆದಿದೆ.
ಬಾಳ್ಳುಪೇಟೆಯ ಕಿತ್ತಲೆಮನೆ ಎಸ್ಟೇಟ್‌ನಲ್ಲಿ ಕೆಲಸ ಮಾಡಲು ಹೋಗುತ್ತಿದ್ದ ಅಣ್ಣು (58) ಎಂಬ ಕಾರ್ಮಿಕನ ಮೇಲೆ ಕಾಡಾನೆ ದಾಳಿಗೆ ಮುಂದಾಗಿತ್ತು. ತಕ್ಷಣ ಎಚ್ಚೆತ್ತುಕೊಂಡ ಕಾರ್ಮಿಕ ಸ್ಥಳದಿಂದ ಓಡಿದ್ದಾನೆ. ಈ ಸಂರ್ಧಭದಲ್ಲಿ ಸಣ್ಣಪುಟ್ಟ ಗಾಯಗಳಾಗಿದ್ದರಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.
ಇದೇ ರೀತಿ ಪಟ್ಟಣಕ್ಕೆ ಸಮೀಪವಿರುವ ಕಿರೇಹಳ್ಳಿ ಸಮೀಪ ಕಾಡಾನೆಗಳು ಬೀಡುಬಿಟ್ಟಿದ್ದು, ಗ್ರಾಮದ ಮಧು ಎಂಬುವರ ಭತ್ತದ ಗದ್ದೆ, ಶುಂಠಿ, ಅಡಿಕೆ ಜೊತೆಗೆ ಸ್ವಲ್ಪ ಪ್ರಮಾಣದ ಕಾಫಿ ಬೆಳೆಯನ್ನು ಆನೆಗಳು ನಾಶಪಡಿಸಿವೆ. ಜೊತೆಗೆ ಹನಿ ನೀರಾವರಿಗಾಗಿ ಅಳವಡಿಸಿದ್ದ ಪೈಪ್‌ಗಳನ್ನು ಜಖಂ ಮಾಡಿವೆ. ಇದರಿಂದಾಗಿ ಸುಮಾರು 3 ಲಕ್ಷಕ್ಕೂ ಹೆಚ್ಚು ನಷ್ಟವುಂಟಾಗಿದೆ.
ಕಳೆದ 5 ದಿನಗಳಿಂದ ಮಧು ಅವರ ತೋಟದ ಸಮೀಪವಿರುವ ಸುಂಡೇಕೆರೆ ಎಸ್ಟೇಟ್‌ನಲ್ಲಿ ಕಾಡಾನೆಗಳ ಹಿಂಡು ಬೀಡುಬಿಟ್ಟಿದ್ದು, ಗ್ರಾಮದ ರೈತರು ಆತಂಕಗೊಂಡಿದ್ದಾರೆ.
ಅರಣ್ಯ ಇಲಾಖೆಯವರು ಗ್ರಾಮದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಓಡಿಸುವ ಪ್ರಯತ್ನ ಸಹ ಮಾಡುತ್ತಿಲ್ಲ ಎಂದು ಮಧು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾಲೂಕಿನಲ್ಲಿ ಕಾಡಾನೆ ಹಾವಳಿ ಮಿತಿ ಮೀರಿದ್ದು ದಿನನಿತ್ಯ ಒಂದಲ್ಲ ಒಂದು ಗ್ರಾಮದಲ್ಲಿ ಕಾಡಾನೆಗಳು ದಾಂದಲೆ ನಡೆಸುತ್ತಿವೆ. ಬೆಳೆದು ನಿಂತ ಬೆಳೆಗಳು ರೈತರಿಗೆ ಸೇರದೆ ಕಾಡಾನೆಗಳ ಪಾಲಾಗುತ್ತಿವೆ. ಕಾಡಾನೆ ಸಮಸ್ಯೆ ಬಗೆಹರಿಸಬೇಕಾದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇತ್ತ ಗಮನ ಹರಿಸಿಲ್ಲ. ಕೂಡಲೇ ಕಾಡಾನೆ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.