ಸಕಲೇಶಪುರ: ತಾಲೂಕಿನ ಹೋಂ ಸ್ಟೇ ಮತ್ತು ರೆಸಾರ್ಟ್ ಗಳಲ್ಲಿ ಮದ್ಯ ಮಾರಾಟ ಹಾಗೂ ಮಾದಕ ದ್ರವ್ಯಗಳ ಸೇವನೆ ಸಂಪೂರ್ಣವಾಗಿ ನಿಷೇಧಿಸಲಾಗಿದ್ದು ನಿಯಮ ಉಲ್ಲಂಘಿಸಿ ಮಾದಕ ವಸ್ತುಗಳ ಸೇವನೆ ಕಂಡು ಬಂದಲ್ಲಿ ಅಂತಹ ಹೋಂ ಸ್ಟೇ ಮತ್ತು ರೆಸಾರ್ಟ್ಗಳ ಮಾಲಿಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಪೊಲೀಸ್ ಉಪ ಅಧೀಕ್ಷಕ ಎಸ್.ಆರ್. ಗೋಪಿ ಹೇಳಿದರು.
ಪಟ್ಟಣದ ಲಯನ್ಸ್ ಭವನದಲ್ಲಿ ಪೋಲಿಸ್ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ತಾಲೂಕಿನ ಹೋಂ ಸ್ಟೇ ಮತ್ತು ರೆಸಾರ್ಟ್ ಮಾಲೀಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಹಲವು ವಿಧ್ವಂಸಕ ಶಕ್ತಿಗಳು ಮಲೆನಾಡಿಗೆ ಲಗ್ಗೆ ಇಟ್ಟಿದ್ದು ಹೀಗೆ ಬರುವವರು ಹೋಂ ಸ್ಟೇ ಮತ್ತು ರೆಸಾರ್ಟ್ಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ ಎಂಬ ದೂರುಗಳಿದೆ. ಆದ್ದರಿಂದ ರೆಸಾರ್ಟ್ ಹಾಗೂ ಹೋಂ ಸ್ಟೇಗಳಿಗೆ ಬರುವಂತಹ ಪ್ರತಿಯೊಬ್ಬರ ಗುರುತಿನ ಚೀಟಿ ಹಾಗೂ ಸಂಪೂರ್ಣ ಮಾಹಿತಿಯನ್ನು ಕಲೆಹಾಕಿ ತಿಂಗಳಿಗೊಮ್ಮೆ ಪೊಲೀಸ್ ಇಲಾಖೆಗೆ ಸಲ್ಲಿಸಬೇಕು ಎಂದರು.
ಪೊಲೀಸ್ ವೃತ್ತ ನಿರೀಕ್ಷಕ ಗಿರೀಶ್ ಮಾತನಾಡಿ ಈಗಾಗಲೇ ರಾಜ್ಯದಲ್ಲಿ ಡ್ರಗ್ ಪ್ರಕರಣಗಳು ಪತ್ತೆಯಾಗುತ್ತಿದ್ದು, ಮಲೆನಾಡಿನ ಹೋಂ ಸ್ಟೇ ಮತ್ತು ರೆಸಾರ್ಟ್ಗಳಲ್ಲೂ ಡ್ರಗ್ ಮಾಫಿಯ ಕಾರ್ಯನಿರ್ವಹಿಸುತ್ತಿದೆ ಎಂಬ ದೂರುಗಳು ಕೇಳಿ ಬಂದಿದೆ. ಆದ್ದರಿಂದ ಮಲೆನಾಡಿನ ಹೋಂ ಸ್ಟೇ ಮತ್ತು ರೆಸಾರ್ಟ್ಗಳಿಗೆ ಬರುವಂತಹ ಅತಿಥಿಗಳು ಅನೈತಿಕ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳದಂತೆ ಹೋಂ ಸ್ಟೇ ಮತ್ತು ಮಾಲೀಕರು ಎಚ್ಚರ ವಹಿಸಬೇಕು ಎಂದರು.
ರೆಸಾರ್ಟ್ ಮಾಲೀಕರ ಸಂಘದ ತಾಲೂಕು ಅಧ್ಯಕ್ಷ ವಿಜಯ್ ಕುಮಾರ್ ಮಾತನಾಡಿ ಅನುಸರಿಸಬೇಕಾದ ನಿಯಮಗಳ ಬಗ್ಗೆ ಬಗ್ಗೆ ಪೋಲೀಸ್ ಇಲಾಖೆ ,ಅರಣ್ಯ ಇಲಾಖೆ, ಅಬಕಾರಿ ಇಲಾಖೆ ಸರಿಯಾಗಿ ಮಾಹಿತಿ ನೀಡಿದರೆ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯಲು ಇಲಾಖೆಗಳಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು.
ಹೋಂ ಸ್ಟೇ ಮಾಲೀಕರ ಸಂಘದ ತಾಲೂಕು ಅಧ್ಯಕ್ಷ ಕುಮಾರಸ್ವಾಮಿ ಮಾತನಾಡಿ ಕೋವಿಡ್ ಕಾರಣದಿಂದಾಗಿ ಕಳೆದ ಆರು ತಿಂಗಳಿಂದ ಯಾವುದೇ ವ್ಯವಹಾರಗಳಿಲ್ಲದೆ ಹೋಂ ಸ್ಟೇ ಮತ್ತು ರೆಸಾರ್ಟ್ ಮಾಲೀಕರು ತೊಂದರೆ ಅನುಭವಿಸುತ್ತಿದ್ದಾರೆ. ಸರ್ಕಾರ ನಮಗೆ ಸೂಕ್ತ ನೆರವು ನೀಡಬೇಕಾಗಿದೆ ಯಾವುದೆ ರೀತಿಯ ಕಾನೂನುಬಾಹಿರ ಚಟುವಟಿಕೆಗಳಿಗೆ ನಾವು ಅವಕಾಶ ನೀಡುವುದಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಗ್ರಾಮಾಂತರ ಠಾಣಾ ಪಿಎಸ್ಐ ಚಂದ್ರಶೇಖರ್, ನಗರ ಠಾಣಾ ಪಿಎಸ್ಐ ರಾಘವೇಂದ್ರ, ಹೋಂಸ್ಟೇ ಮತ್ತು ರೆಸಾರ್ಟ್ಗಳ ಮಾಲೀಕರಾದ ಮಸ್ತಾರೆ ಲೋಕೇಶ್, ಚಂದ್ರೇಗೌಡ ,ಪೃಥ್ವಿ ,ವಿಜಯರಾಜ್, ಬ್ಯಾಕರವಳ್ಳಿ ಜಯಣ್ಣ ,ಮಹೇಶ್ ಭಟ್ ಸೇರಿದಂತೆ ಸುಮಾರು 100 ಕ್ಕಿಂತ ಹೆಚ್ಚು ಮಾಲೀಕರು ಸಭೆಯಲ್ಲಿ ಭಾಗವಹಿಸಿದ್ದರು.