ಹಾಸನ: ಕುಡಿದ ಅಮಲಿನಲ್ಲಿ ಮೂವರು ಯುವಕರು ತಮ್ಮ ಕಾರಿಗೆ ಅಡ್ಡ ಸಿಕ್ಕ ಬೈಕನ್ನು ಒಂದು ಕಿ.ಮೀ. ವರೆಗೆ ಎಳೆದೊಯ್ದ ಘಟನೆ ತಡರಾತ್ರಿ ನಗರದಲ್ಲಿ ನಡೆದಿದೆ.
ನೈಟ್ ಡ್ರೈವ್ ಬಂದಿದ್ದ ಮೂವರು ಯುವಕರು ಕಾರಿನ ಮ್ಯೂಸಿಕ್ ಸಿಸ್ಟಂನಲ್ಲಿ ಜೋರಾಗಿ ಹಾಡು ಹಾಕಿದ್ದರು. ಯುವಕರ ತಂಡವಿದ್ದ ಕಾರು ಎನ್ಆರ್ ವೃತ್ತದಿಂದ ಡೈರಿ ಸರ್ಕಲ್ ಕಡೆ ಬರುತ್ತಿದ್ದ ಬೈಕ್ಗೆ ಡಿಕ್ಕಿ ಹೊಡೆದಿದೆ. ಮ್ಯೂಸಿಕ್ ಸಿಸ್ಟಂ ಸೌಂಡ್ ಜೋರಾಗಿದ್ದ ಕಾರಣ ಡಿಕ್ಕಿ ಹೊಡೆದಿದ್ದು ಕೇಳಿಸಲಿಲ್ಲ.
ಅಪಘಾತವಾದಮೇಲೆ ಕಾರನ್ನೂ ನಿಲ್ಲಿಸದ ಯುವಕರು ಎನ್ ಆರ್ ಸರ್ಕಲ್ ವರೆಗೆ ಅಂದರೆ ಸುಮಾರು ಒಂದು ಕಿ.ಮೀ. ತನಕ ಬೈಕನ್ನು ಹಾಗೇ ಎಳೆದುಕೊಂಡು ಹೋಗಿದ್ದಾರೆ. ಎನ್ ಆರ್ ವೃತ್ತದಲ್ಲಿ ಇದನ್ನು ಗಮನಿಸಿ ಸ್ಥಳೀಯರು ಕಾರನ್ನು ಅಡ್ಡಗಟ್ಟಿ, ಯುವಕರಿಗೆ ಹಿಗ್ಗಾಮುಗ್ಗಾ ಧರ್ಮದೇಟು ನೀಡಿ ನಶೆ ಇಳಿಸಿ ಪೊಲೀಸರಿಗೊಪ್ಪಿಸಿದ್ದಾರೆ.
ಅದೃಷ್ಟವಶತ್ ಅಪಘಾತಕೀಡಾದ ಬೈಕ್ ಸವಾರ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ, ಕಾರಿನ ಒಂದು ಭಾಗ ಹಾಗೂ ಬೈಕ್ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.