ಹಾಸನ : ಲಾಕ್ಡೌನ್ ಮತ್ತು ನೋಟ್ ಬ್ಯಾನ್ ಮಾಡಲು ಕ್ಷಣಾರ್ಧದಲ್ಲಿ ನಿರ್ಧಾರ ಕೈಗೊಂಡ ನೀವು ಚೀನಾ ವಸ್ತುಗಳಿಗೆ ನಿರ್ಬಂಧ ಹೇರಲು ಯಾಕೆ ಸಮಯ ತೆಗೆದುಕೊಳ್ಳುತ್ತಿದ್ದೀರಿ. ತಾಕತ್ತಿದ್ರೆ ಚೀನಾ ವಸ್ತುಗಳನ್ನು ನಿರ್ಬಂಧಿಸಿ ಎಂದು ಸಂಸದ ಡಿ ಕೆ ಸುರೇಶ್, ಪ್ರಧಾನಿ ನರೇಂದ್ರ ಮೋದಿಯವರಿಗೆ ಸವಾಲು ಹಾಕಿದ್ದಾರೆ.
ಅರಸೀಕೆರೆ ತಾಲೂಕಿನ ಗಂಡಸಿ ಹೋಬಳಿಯ ರೈತರಿಂದ ಖರೀದಿ ಮಾಡಿದ್ದ ತರಕಾರಿಗೆ ಚೆಕ್ ವಿತರಣೆ ಮಾಡಿ ಮಾತನಾಡಿದ ಅವರು, ಜಿಎಸ್ಟಿ ತರುವಲ್ಲಿ ಎಲ್ಲರ ವಿರೋಧದ ನಡುವೆ ಕಾನೂನು ರೂಪಿಸಿದ ನೀವು, ಚೀನಾ ವಿರುದ್ಧ ಯಾಕೆ ನಿರ್ಧಾರ ಕೈಗೊಳ್ಳುತ್ತಿಲ್ಲ. ಗಡಿಯಲ್ಲಿ ನಾವು ದಿಟ್ಟ ಉತ್ತರ ನೀಡುತ್ತಿದ್ದೇವೆ ಎನ್ನುತ್ತಿರುವ ನೀವು ಮೊದಲು ಚುನಾವಣೆ ನಿರ್ಬಂಧ ಹೇರಿ ತೋರಿಸಿ. ಬಿಜೆಪಿಯವರು ಏನು ಸಾಧನೆ ಮಾಡುತ್ತಿದ್ದಾರೆ ದೇಶದಲ್ಲಿ ಎಂದು ಜನ ಪ್ರಶ್ನಿಸುತ್ತಿದ್ದಾರೆ.
ದೇಶದ ಜನರಲ್ಲಿರುವ ಧಾರ್ಮಿಕ ಭಾವನೆ ಮುಂದಿಟ್ಟುಕೊಂಡು ರಾಜಕೀಯ ಮಾಡುವುದು ಬಹುದೊಡ್ಡ ದುರಂತ. ಧರ್ಮದಂತಹ ಸೂಕ್ಷ್ಮ ವಿಚಾರಗಳಲ್ಲಿ ಕೀಳುಮಟ್ಟದ ರಾಜಕೀಯ ಮಾಡಲಾಗುತ್ತಿದೆ. ಮೋದಿ 20 ಲಕ್ಷ ಕೋಟಿ ಹಣ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಎರಡು ಲಕ್ಷ ಕೋಟಿ ಹಣವನ್ನು ರೈತರಿಗೆ ನೀಡುವುದಾಗಿ ಹೇಳಿದ್ದಾರೆ. ಈವರೆಗೆ ಯಾವ ರೈತರ ಖಾತೆಗೆ ಬಿಡಿಗಾಸು ಕೂಡ ಹಾಕಿಲ್ಲ ಎಂದು ವಾಗ್ದಾಳಿ ನಡೆಸಿದರು.