ಹಾಸನ: ಕೋವಿಡ್-19 ನಿಯಂತ್ರಣ ಕುರಿತು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ಶಾಸಕ ಪ್ರೀತಂ ಜೆ. ಗೌಡ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ನಡುವೆ ವಾಕ್ಸಮರ ನಡೆಯಿತು.
ಜಿಲ್ಲೆಯಲ್ಲಿ ಕೋವಿಡ್-19 ಕುರಿತು ಜಿಲ್ಲಾಡಳಿತ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಚರ್ಚೆ ನಡೆಯುತ್ತಿದ್ದ ಸಭೆಯಲ್ಲಿ ಹಾಸನದ ನಗರದ ಬಿ.ಎಂ. ರಸ್ತೆಯಲ್ಲಿರುವ ಕ್ವಾಲಿಟಿ ಬಾರ್ ಬಗ್ಗೆ ವಿಚಾರ ಪ್ರಸ್ತಾಪಿಸಿದ ಸಂಸದ ಪ್ರಜ್ವಲ್ ರೇವಣ್ಣ, ಕ್ವಾಲಿಟಿ ಬಾರ್ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹಾಸನ ಪುರದಮ್ಮ ದೇವಸ್ಥಾನದ ಬಳಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವನನ್ನು ಹಿಡಿದು ಅದೇ ದಿನ ಜೈಲಿಗೆ ಕಳುಹಿಸಿದ್ದಾರೆ. ಆದರೆ ಕ್ವಾಲಿಟಿ ಬಾರ್ ಮೇಲೆ ಕ್ರಮ ಕೈಗೊಂಡಿಲ್ಲವೆಂದು ಪ್ರಜ್ವಲ್ ಆರೋಪಿಸಿ, ಜಿಲ್ಲೆಯಲ್ಲಿ ಒಬ್ಬೊಬ್ಬರಿಗೊಂದು ನ್ಯಾಯವಿದೆಯೇ ಎಂದು ಪ್ರಶ್ನಿಸಿದರು.
ಇನ್ನು ಅಬಕಾರಿ ಇಲಾಖೆ ಅಧಿಕಾರಿ ಮಾತನಾಡಿ, ಉಪ ವಿಭಾಗಾಧಿಕಾರಿಯವರ ನೇತೃತ್ವದಲ್ಲಿ ತನಿಖೆ ನಡೆಸಲಾಗಿದೆ ಎಂದರು. ಆಗ ಅಬಕಾರಿ ಡಿಸಿ, ಈವರೆಗೆ ಜಿಲ್ಲಾಧಿಕಾರಿಗಳಿಗೆ ಯಾವುದೇ ವರದಿ ಸಲ್ಲಿಸಿಲ್ಲವೆಂದು ದೂರಿದರು. ಇದಕ್ಕೆ ಹಾಸನದ ಜನಪ್ರತಿನಿಧಿಗಳ ಬೆಂಬಲವಿದೆ ಎಂದು ಶಾಸಕ ಪ್ರೀತಂ ಜೆ. ಗೌಡ ವಿರುದ್ಧ ಪ್ರಜ್ವಲ್ ರೇವಣ್ಣ ಆರೋಪಿಸಿದರು. ಬಳಿಕ ಮಧ್ಯಪ್ರವೇಶಿಸಿದ ಸಚಿವ ಮಾಧುಸ್ವಾಮಿ, ಇಬ್ಬರನ್ನೂ ಸಮಾಧಾನಪಡಿಸಿ ಲಾಕ್ಡೌನ್ ಮುಗಿಯುವ ತನಕ ಎಲ್ಲಾ ಮದ್ಯದಂಗಡಿ ಬಂದ್ ಮಾಡಿ. ಕೋವಿಡ್ ಮುಗಿದ ಬಳಿಕ ಮದ್ಯದಂಗಡಿ ಪ್ರಾರಂಭಿಸಿದಾಗ ಸ್ಟಾಕ್ನಲ್ಲಿ ವ್ಯತ್ಯಾಸ ಕಂಡು ಬಂದರೆ ಯಾವುದೇ ಮುಲಾಜಿಲ್ಲದೆ ಲೈಸನ್ಸ್ ರದ್ದುಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.