ಹಾಸನ: ತಮ್ಮ ಕಾಲಾವಧಿಯಲ್ಲಿ ಸಕಲೇಶಪುರ-ಆಲೂರು-ಕಟ್ಟಾಯ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಶಾಸಕ ಹೆಚ್. ಕೆ. ಕುಮಾರಸ್ವಾಮಿ ಒಂದು ವಿವರಣೆ ನೀಡಲಿ ಎಂದು ಕಾಂಗ್ರೆಸ್ ಮುಖಂಡ ಮತ್ತು ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ದೇವರಾಜೇಗೌಡ ಒತ್ತಾಯಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಶಾಸಕರು ಗೊರೂರು-ಕಾಲ್ಲೆ ರಸ್ತೆ ಅಭಿವೃದ್ಧಿ ಮಾಡುವ ಬಗ್ಗೆ ತಿಳಿಸಿರುವುದು ತುಂಬ ಸಂತೋಷದ ವಿಷಯ. ಹಾಗಾಗಿ ನಮ್ಮ ಸಂಘದಿಂದ ಅವರಿಗೆ ಧನ್ಯವಾದ ತಿಳಿಸುತ್ತೇವೆ. ಆದ್ರೆ ಕ್ಷೇತ್ರಕ್ಕೆ ಶಾಸಕರಾದ 13 ವರ್ಷದ ಅವಧಿಯಲ್ಲಿ ಸುಮಾರು 600 ಕೋಟಿ ಹಣವನ್ನು ಅಭಿವೃದ್ಧಿಗೆ ವ್ಯಯ ಮಾಡಿರುವುದಾಗಿ ಹೇಳಿದ್ದಾರೆ. ಈಗ 14 ತಿಂಗಳ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ 500 ಕೋಟಿ ಕೆಲಸ ಆಗಿದೆ ಎಂದು ಹೇಳಿಕೆ ನೀಡಿದ್ದಾರೆ. ಅಂದರೆ ಒಟ್ಟು 1100 ಕೋಟಿ ಹಣವನ್ನು ಕಟ್ಟಾಯ ಹೋಬಳಿಯ ಅಭಿವೃದ್ಧಿಗಾಗಿ ಖರ್ಚು ಮಾಡಿರುವುದಾಗಿ ತಿಳಿಸಿದ್ದಾರೆ ಎಂದರು.
ಇದುವರೆಗೂ ಇಷ್ಟು ದೊಡ್ಡ ಮೊತ್ತದ ಹಣದಲ್ಲಿ ಯಾವ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದ್ದೀರಿ? ಎಲ್ಲಿ ಮಾಡಿದ್ದೀರಿ? ಸದರಿ ಕಾಮಗಾರಿಗಳಿಗೆ ಯಾವಾಗ ಟೆಂಡರ್ ಆಗಿದೆ? ಕಾಮಗಾರಿಗಳ ಸ್ವರೂಪಗಳ ಬಗ್ಗೆ ಮಾಹಿತಿ ನೀಡಿ ಎಂದು ದೇವರಾಜೇಗೌಡ ಆಗ್ರಹಿಸಿದರು.
ಸುಳ್ಳು ಹೇಳಿಕೆ ನೀಡಿ ಜನಗಳನ್ನು ಧಿಕ್ಕು ತಪ್ಪಿಸುವ ಕೆಲಸವನ್ನು ಶಾಸಕರು ಮಾಡುತ್ತಿದ್ದಾರೆ. ಈ 1100 ಕೋಟಿ ಹಣದಲ್ಲಿ ಒಂದು ಜಲಾಶಯವನ್ನೇ ನಿರ್ಮಾಣ ಮಾಡಬಹುದಾಗಿತ್ತು. ವಾಸ್ತವವಾಗಿ ಹೇಳುವುದಾದರೇ ಒಂದೇ ಒಂದು ಕಾಮಗಾರಿ ಆಗಿಲ್ಲ. ಹತ್ತಾರು ಹಳ್ಳಿಗಳಿಗೆ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಿರಬಹುದು. ಇದನ್ನೇ ಅಭಿವೃದ್ಧಿ ಮಾಡಿದ್ದೇವೆ ಎಂದು ಹೇಳಿಕೊಳ್ಳುವ ಹವ್ಯಾಸ ನಿಮ್ಮದು ಎಂದು ವ್ಯಂಗ್ಯವಾಡಿದರು.
ಪರ್ಸೆಂಟೇಜ್ ತೆಗೆದುಕೊಂಡು ಕಾಲಹರಣ ಮಾಡೋದು ಬಿಟ್ಟರೆ ಯಾವುದೇ ರೀತಿಯ ಕಾಮಗಾರಿಗಳನ್ನು ಮಾಡಿಲ್ಲ. ಇನ್ನು ಮುಂದಾದರು ಶಾಸಕ ಹೆಚ್ ಕೆ ಕುಮಾರಸ್ವಾಮಿ ಕೇವಲ ಭರವಸೆ ಕೊಡುವುದು, ಸುಳ್ಳು ಹೇಳುವುದನ್ನು ಬಿಟ್ಟು ಕೆಲಸ ಮಾಡಲಿ ಎಂದು ದೇವರಾಜೇಗೌಡ ಹೇಳಿದ್ರು.