ಹಾಸನ: ನ್ಯಾಯಯುತ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಮುಂಭಾಗ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಘಟನೆಗಳ ಜಂಟಿ ವೇದಿಕೆಯಿಂದ ಪ್ರತಿಭಟನೆ ನಡೆಸಲಾಯಿತು.
ಭೂಮಿಯ ಒಡೆತನವೂ ಸೇರಿದಂತೆ, ರೈತ ಹಾಗೂ ಕೃಷಿ ಕಾರ್ಮಿಕರ ಹಿತಾಸಕ್ತಿ ಬದ್ಧವಾಗಿದೆ. ಕರ್ನಾಟಕ ಭೂ ಸುಧಾರಣಾ ಕಾಯ್ದೆಯು ಇಡೀ ದೇಶಕ್ಕೆ ಮಾದರಿಯಾಗಿದೆ. ಇಂತಹ ರೈತ ಹಾಗೂ ಕೃಷಿ ಕಾರ್ಮಿಕರ ಪರವಾಗಿದ್ದ ಜನಪರವಾದ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮವು ರೈತ ವಿರೋಧಿಯಾಗಿದ್ದು, ಬಂಡವಾಳಶಾಹಿ ಕಾರ್ಪೊರೇಟ್ ಕಂಪನಿಗಳ ಪರವಾದ ನಿಲುವಿನಿಂದ ಕೂಡಿದೆ ಎಂದು ಹೇಳಿದರು.
ಕೃಷಿಕರ, ಭೂರಹಿತ ಕೃಷಿ ಕಾರ್ಮಿಕರ ಹಿತಾಸಕ್ತಿಗಳನ್ನು ಬಲಿಕೊಡುವ ಮತ್ತು ಲಕ್ಷಾಂತರ ಭೂ ರಹಿತ ಬಡ ಜನರ ಭೂ ಒಡೆತನದ ಕನಸಿಗೆ ಕೊಳ್ಳಿ ಇಡುವ ಇಂತಹ ತಿದ್ದುಪಡಿ ಪ್ರಸ್ತಾಪಗಳನ್ನು ಈ ಕೂಡಲೇ ಹಿಂಪಡೆಯಬೇಕು. ಅನ್ನ ಕೊಡುವ ಭೂಮಿಯನ್ನು ರೈತರಿಂದ ಕಿತ್ತುಕೊಂಡು ಲೂಟಿಕೋರ ಬಂಡವಾಳ ಶಾಹಿಗಳಿಗೆ ಪರಭಾರೆ ಮಾಡಿದೆ. ಇಂತಹ ಕೃಷಿ ವಿರೋಧಿ ನಿರ್ಧಾರಗಳ ಹಿಂದೆ ದುರುದ್ದೇಶ ರಾಜಕೀಯ ಅಡಗಿದೆ ಎನ್ನುವುದು ಸತ್ಯವಾಗಿದೆ. ಆರ್ಥಿಕವಾಗಿ ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ಪೂರಕವಾಗಿರುವ ಕೃಷಿ ಚಟುವಟಿಕೆಯಿಂದ ರೈತರನ್ನು, ರೈತ ಕಾರ್ಮಿಕರನ್ನು ಅವರ ದುಡಿಮೆಯ ನೆಲೆಯಿಂದ ಶಾಶ್ವತವಾಗಿ ಒಕ್ಕಲೆಬ್ಬಿಸಿ ಬಂಡವಾಳ ಶಾಹಿ ರಾಜಕಾರಣಕ್ಕೆ ಗುಲಾಮರನ್ನಾಗಿಸುವ ಹುನ್ನಾರ ಸರ್ಕಾರ ಈ ತಿದ್ದುಪಡಿ ಪ್ರಸ್ತಾಪ ಹಿಂದಿದೆ ಎಂದು ದೂರಿ ಕಿಡಿಕಾರಿದರು.