ಅರಕಲಗೂಡು: ಕೆಲ ದಿನಗಳ ಹಿಂದೆ ಅರಕಲಗೂಡಿನ ಸರ್ಕಾರಿ ಆಸ್ಪತ್ರೆಗೆ ಜ್ವರಕ್ಕೆ ಚಿಕಿತ್ಸೆ ಪಡೆಯಲೆಂದು ಆಗಮಿಸಿದ್ದ ಚಿಕ್ಕಹಳ್ಳಿ ಗ್ರಾಮದ ಮಹಿಳೆಯೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಚಿಕ್ಕಹಳ್ಳಿ ಗ್ರಾಮದ 35 ವರ್ಷದ ಮಹಿಳೆಗೆ ಸೋಂಕು ತಗುಲಿದ ಹಿನ್ನೆಲೆ ರಾಮನಾಥಪುರದ ವೈದ್ಯ, ಆರೋಗ್ಯ ಸಹಾಯಕ, ಗ್ರಾಮಲೆಕ್ಕಾಧಿಕಾರಿ ಮತ್ತಿತರ ಅಧಿಕಾರಿಗಳ ತಂಡ ಚಿಕ್ಕಹಳ್ಳಿ ಗ್ರಾಮಕ್ಕೆ ತೆರಳಿ ಸೋಂಕಿತೆಯ ಮನೆ ಮತ್ತು ರಸ್ತೆಯನ್ನು ಸೀಲ್ ಡೌನ್ ಮಾಡಿದೆ. ಇದರಿಂದ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ.
ಕೊಣನೂರಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದ ರ‍್ಯಾಪಿಡ್ ಆ್ಯಂಟಿಜನ್ ಪರೀಕ್ಷೆಯಲ್ಲಿ ರಾಮನಾಥಪುರ ಹೋಬಳಿಯ ಬಸವನಹಳ್ಳಿಯಲ್ಲಿ ಸೋಮವಾರ ದೃಢಪಟ್ಟಿದ್ದ ಸೋಂಕಿತನ ಪ್ರಾಥಮಿಕ ಸಂಪರ್ಕದಲ್ಲಿದ್ದ 24 ವರ್ಷದ ಆತನ ಸ್ನೇಹಿತನಿಗೂ ಕೊರೊನಾ ಸೋಂಕು ದೃಢಪಟ್ಟಿದೆ.
ಹೋಬಳಿಯ ರುದ್ರಪಟ್ಟಣದಲ್ಲಿ ತಂದೆ ಮಗನಿಗೆ ಮತ್ತು ಲಕ್ಕೂರಿನ 24 ವರ್ಷದ ಗರ್ಭಿಣಿಗೆ ಕೊರೊನಾ ಸೋಂಕು ದೃಢಪಟ್ಟಿದೆ.