ಹಾಸನ: ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಕಳೆದ ಹತ್ತು ದಿನಗಳಿಂದ ದಿನೆ ದಿನೇ ಹೆಚ್ಚಾಗುತ್ತಿದ್ದು, ಇವರೆಲ್ಲರು ಮುಂಬೈ ಮೂಲದಿಂದ ಬಂದವರೆ ಆಗಿದ್ದಾರೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಸ್ಪಷ್ಟಪಡಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ನ್ಯಾಯಾಂಗಣ ಸಭಾಂಗಣದಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಇಂದು 18 ಜನರಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಇವರು ಚನ್ನರಾಯಪಟ್ಟಣ ತಾಲೂಕಿಗೆ ಸೇರಿದವರು. ಇವರು ಮುಂಬೈನಿಂದ ಬಂದವರು ಎಂದು ಮಾಹಿತಿ ನೀಡಿದರು.
ಹಾಸನ ಜಿಲ್ಲೆಯಲ್ಲಿ ಇಲ್ಲಿಯವರೆಗೂ ಕೊರೊನಾ ಪಾಸಿಟಿವ್ 85 ಕ್ಕೆ ಏರಿಕೆಯಾಗಿದ್ದು, ಇವರನ್ನು ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು 450 ಜನರ ಪರೀಕ್ಷೆಯ ವರದಿ ಬರಬೇಕಾಗಿದ್ದು, ಸದ್ಯದಲ್ಲೆ ನೂರರ ಗಡಿ ದಾಟುವ ಸಾಧ್ಯತೆ ಇದೆ ಎಂದರು.
ಚನ್ನರಾಯಪಟ್ಟಣ ತಾಲೂಕಿನಲ್ಲಿ ಗರಿಷ್ಠ 60 ಮಂದಿ ಸೋಂಕಿತರು ಪತ್ತೆಯಾಗಿದ್ದು, ಹೊಳೆನರಸೀಪುರದಲ್ಲಿ 16, ಆಲೂರು ತಾಲೂಕಿನಲ್ಲಿ 3, ಅರಕಲಗೂಡು 2, ಅರಸೀಕೆರೆ 1, ಹಾಸನದಲ್ಲಿ 3 ಪ್ರಕರಣ ದಾಖಲಾಗಿವೆ. ಇವರೆಲ್ಲರಿಗೂ ಮುಂಬೈ ನಂಟಿದೆ ಎಂದು ವಿವರಣೆ ನೀಡಿದರು.
ಹಾಸನ ಜಿಲ್ಲೆಯವರು ಮುಂಬೈನಲ್ಲಿ ವಾಸವಿದ್ದು, ಈಗ ವಾಪಸ್ ಆಗಮಿಸುತ್ತಿರುವುದರಿಂದ ಕೊರೊನಾ ಪ್ರಕರಣ ದಿನೆ ದಿನೇ ಏರಿಕೆಯಾಗುತ್ತಿವೆ. ಇಂದು ಮತ್ತು ನಾಳೆ ಹಾಸನದಿಂದ ಬಿಹಾರಕ್ಕೆ ರೈಲು ಸಂಚಾರ ಮಾಡಲಿದ್ದು, ಹಾಸನ ಜಿಲ್ಲೆಯಿಂದ ಸುಮಾರು 16,000 ಜನರು ಪ್ರಯಾಣ ಬೆಳೆಸಲಿದ್ದಾರೆ. ಇವರನ್ನು ಇಲ್ಲಿಯೇ ಪರೀಕ್ಷೆ ಮಾಡಿಸಿ, ಅಗತ್ಯವಾದ ಆಹಾರ ಪದಾರ್ಥ, ಮಾಸ್ಕ್, ಸ್ಯಾನಿಟೈಸರ್ ನೀಡಿ ಕಳುಹಿಸಿಕೊಡಲಾಗುವುದು ಎಂದು ತಿಳಿಸಿದರು.
ಇನ್ನು ಕಳೆದ ಒಂದು ತಿಂಗಳಿನಿಂದ ವಿದ್ಯುತ್ ಬಿಲ್ ಹೆಚ್ಚು ಬರುತ್ತಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿ ಆರ್.ಗಿರೀಶ್, ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸುವುದಾಗಿ ಹೇಳಿದರು.
ಭಾನುವಾರ ಪೂರ್ಣ ದಿನ ಲಾಕ್ಡೌನ್ ಇದ್ದು, ಮದುವೆ ಕಾರ್ಯಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಉಳಿದಂತೆ ವ್ಯಾಪಾರ ವಹಿವಾಟುಗಳು ಸ್ಥಗಿತವಾಗಿರುತ್ತವೆ ಎಂದರು.