ಹಾಸನ: ಕಾಂಗ್ರೆಸ್ ಪಕ್ಷ ಸಮಯಕ್ಕೆ ತಕ್ಕಂತೆ ರಾಜಕೀಯ ಮಾಡುವ ಪಕ್ಷ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ ಕುಮಾರಸ್ವಾಮಿ ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಪಕ್ಷ ಜಾತ್ಯತೀತ ನಿಲುವಿನೊಂದಿಗೆ ಮುನ್ನಡೆಯುತ್ತಿದೆ. ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ ಅವರು ಜೆಡಿಎಸ್ ಪಕ್ಷಕ್ಕೆ ಯಾವುದೇ ತತ್ವ ಸಿದ್ಧಾಂತ ಇಲ್ಲ ಎಂದು ಆರೋಪ ಮಾಡಿದ್ದಾರೆ. ಆದರೆ ಕಾಂಗ್ರೆಸ್ಗೆ ಯಾವ ತತ್ವ ಸಿದ್ಧಾಂತ ಇದೆ ಎಂಬುವುದನ್ನು ಇವರು ತಿಳಿಸಬೇಕಾಗಿದೆ. ಇಂತಹ ಹೇಳಿಕೆ ಖಂಡನೀಯವಾಗಿದ್ದು, ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು.
2018 ರಲ್ಲಿ ನಾವೇನು ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ರಚನೆ ಮಾಡುತ್ತೇವೆ ಎಂದು ಹೋಗಿರಲಿಲ್ಲ. ಅವರೇ ಬೆಂಬಲ ನೀಡಿದ್ದರಿಂದ ಸರ್ಕಾರ ರಚನೆ ಮಾಡಿ ಅಧಿಕಾರ ನಡೆಸಿದ್ದೇವೆ ಎಂಬುವುದನ್ನು ಅರ್ಥ ಮಾಡಕೊಳ್ಳಬೇಕಿದೆ. ಕಾಂಗ್ರೆಸ್, ಜೆಡಿಎಸ್ ನಿಲುವಿನ ಬಗ್ಗೆ ಟೀಕಿಸುವ ನೈತಿಕತೆ ಅವರಿಗೆ ಇಲ್ಲ. ಪ್ರಸ್ತುತ ರಾಜಕೀಯ ಸ್ಥಿತಿಗತಿಗನ್ನು ಗಮನಿಸಿದರೆ ಬಹುಮತ ಪಡೆಯಲು ಯಾವ ಪಕ್ಷಕ್ಕೂ ಆಗುವುದಿಲ್ಲ ಎಂದರು.
ಜೆಡಿಎಸ್ ಪಕ್ಷ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತೇವೆ ಎಂದು ಹೇಳಿಲ್ಲ. ರಾಜ್ಯದ ಅತಿವೃಷ್ಠಿ ಅನಾವೃಷ್ಠಿಯನ್ನು ಅವಲೋಕಿಸಿದರೆ ಅಭಿವೃದ್ಧಿ ದೃಷ್ಟಿಯಿಂದ ಸಮಯ ಬಂದಾಗ ಬೆಂಬಲ ನೀಡುವುದು ಅಗತ್ಯವಾಗಿದೆ. ಬಿಜೆಪಿ ಸರ್ಕಾರ ಅನರ್ಹ ಶಾಸಕರಿಕೆ ಹೆಚ್ಚಿನ ಅನುದಾನ ನೀಡುವ ತಾರತಮ್ಯ ನಿಲುವು ತಾಳುತ್ತಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ನವರಿಗೆ ಇದು ಶೋಭೆ ತರುವುದಿಲ್ಲ. ಅಭಿವೃದ್ದಿ ದೃಷ್ಟಿಯಿಂದ ಸರ್ಕಾರದ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು ಎಂದರು.
ಹಾಸನದಿಂದ ಸಕಲೇಶಪುರ ಮಾರ್ಗದ ಎನ್ ಹೆಚ್ 75 ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿದ್ದು ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಮತ್ತು ಉಪಮುಖ್ಯಮಂತ್ರಿ ಕಾರಜೋಳ ಅವರನ್ನು ಭೇಟಿ ಮಾಡಿ ರಸ್ತೆ ಸ್ಥಿತಿಗಳ ಮನವರಿಕೆ ಮಾಡಿದ್ದೇವೆ. ಪರಿಣಾಮ ರಸ್ತೆ ಕಾಮಗಾರಿ ಶೀಘ್ರವಾಗಿ ಮುಗಿಸುವಂತೆ ಸೂಚಿಸಿದ್ದಾರೆ. ಅದರಂತೆ ಕಾಮಗಾರಿ ನಡೆಯುತ್ತದೆ ಎಂದರು.