ಹಾಸನ: ಕಾಂಗ್ರೆಸ್ ಪಕ್ಷ ತನ್ನ ಆಡಳಿತಾವಧಿಯಲ್ಲಿ ಜಾರಿಗೊಳಿಸಿದ ಜನಪರ ಕಾರ್ಯಕ್ರಮಗಳನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋಗಿದೆ. ಮುಂದಿನ 15 ವರ್ಷಗಳ ಕಾಲ ಕಾಂಗ್ರೆಸ್ ಸರ್ಕಾರ ಅಧಿಕಾರ ನಡೆಸುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ವಸತಿ ಖಾತೆ ಸಚಿವ ಜಮೀರ್ ಅಹಮದ್ ಹೇಳಿದ್ದಾರೆ.
ಜಿಲ್ಲೆಯ ಅರಸೀಕೆರೆಯಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮುಖ್ಯಮಂತ್ರಿಯ ಅವಧಿ ಎಷ್ಟು ವರ್ಷ ಅಂತ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ಕಾಂಗ್ರೆಸ್ ಪಕ್ಷ ಹೈಕಮಾಂಡ್ ಅಣತಿಯಂತೆ ನಡೆಯುವ ಪಕ್ಷ. ಎಲ್ಲ ತೀರ್ಮಾನಗಳನ್ನು ಹೈಕಮಾಂಡ್ ತೆಗೆದುಕೊಳ್ಳುತ್ತದೆ ಮತ್ತು ಪಕ್ಷದ ಸದಸ್ಯರೆಲ್ಲ ಅದಕ್ಕೆ ಬದ್ಧರಾಗಿರುತ್ತಾರೆ. ಕಾಂಗ್ರೆಸ್ ಪಕ್ಷ ತನ್ನ ಆಡಳಿತಾವಧಿಯಲ್ಲಿ ಜಾರಿಗೊಳಿಸಿದ ಜನಪರ ಕಾರ್ಯಕ್ರಮಗಳನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋಗುವುದರಿಂದ ಮುಂದಿನ ಹದಿನೈದು ವರ್ಷಗಳ ಕಾಲ ಅಧಿಕಾರ ನಡೆಸುವುದನ್ನು ಯಾರೂ ತಪ್ಪಿಸಲಾಗದು ಎಂದು ಹೇಳಿದರು.
ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ನಡೆದ ಗಲಾಟೆ ವಿಚಾರವಾಗಿ ಪ್ರತಿಕ್ರಿಯಿಸಿ, ಈ ಘಟನೆ ಆಗಬಾರದಿತ್ತು, ಆಗಿದೆ. ಈಗ ಎಲ್ಲ ನಿಯಂತ್ರಣದಲ್ಲಿದ್ದು, ಯಾವುದೇ ಸಮಸ್ಯೆ ಇಲ್ಲ. ಬಿಜೆಪಿಯವರಿಗೆ ಹೇಳೋಕೆ ಏನು ಇಲ್ಲ. ಪ್ರತಿ ಸಲ, ಸಣ್ಣ-ಪುಟ್ಟ ಗಲಾಟೆಯಾದರೂ ಸಿ.ಟಿ.ರವಿ, ಈಶ್ವರಪ್ಪ ಆಗಲಿ, ಇಲ್ಲಿ ಪಾಕಿಸ್ತಾನ ಮಾಡಲು ಹೊರಟ್ಟಿದ್ದಾರೆ. ಜಿಲ್ಲಾಡಳಿತದಿಂದ ಅನುಮತಿ ಪಡೆದು ಔರಂಗಜೇಬ್ ಕಟೌಟ್ ಮೆರವಣಿಗೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಈಗ ಆ ಬಗ್ಗೆ ಚರ್ಚೆ ಬೇಡ. ಈಗ ಎಲ್ಲವೂ ಶಾಂತವಾಗಿದೆ. ಯಾವ ಸಮಸ್ಯೆನೂ ಇಲ್ಲ. ಅನುಮತಿ ಪಡೆದುಕೊಂಡಿರಲಿಲ್ಲವೆಂದರೆ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ಈ ಕುರಿತು ಮುಖ್ಯಮಂತ್ರಿಗಳು ನಿನ್ನೆಯೇ ಹೇಳಿದ್ದು, ಯಾವುದೇ ಸಮಾಜದ ಮೆರವಣಿಗೆ ಮಾಡಬೇಕಾದರೆ ಕಲ್ಲು ತೂರಾಟ ಮಾಡುವುದು ತಪ್ಪು ಎಂದು ತಿಳಿಸಿದ್ದಾರೆ ಎಂದರು.
ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ನಮ್ಮ ಹಿರಿಯ ನಾಯಕರು, ಆ ಬಗ್ಗೆ ಗೌರವವಿದೆ. 7 ಜನ ಲಿಂಗಾಯತರನ್ನು ನಾವು ಮಂತ್ರಿ ಮಾಡಿದ್ದೇವೆ. ಅವರಂತೆ ನಾನು ಮುಸ್ಲಿಮರಿಗೆ ಇಂತಹ ಕಡೆ ಪೋಸ್ಟ್ ಕೊಡಿ ಎಂದು ಹೇಳಲಾಗುತ್ತಾ?. ಯಾವ ಅಧಿಕಾರಿ ಉತ್ತಮ ಕೆಲಸ ಮಾಡ್ತಾರೋ ಅವರನ್ನು ಹಾಕಿಕೊಳ್ಳಬೇಕು. ಕಲಬುರಗಿಯಲ್ಲಿ ಫೌಜಿಯಾ ಎಂಬ ಡಿಸಿ ಇದ್ದಾರೆ. ಅವರು ಒಳ್ಳೆ ಕೆಲಸ ಮಾಡಿದ್ದಾರೆ, ಅವರಿಗೆ ಡಿಮ್ಯಾಂಡ್ ಇದೆ. ಸಚಿವರಾದ ಎಂ.ಬಿ.ಪಾಟೀಲ್, ಪ್ರಿಯಾಂಕ್ ಖರ್ಗೆ, ಸಂತೋಷ್ ಲಾಡ್ ಅವರು ತಮ್ಮ ಜಿಲ್ಲೆಗಳಿಗೆ ಬೇಕು ಅಂತಿದ್ರು, ಈಗ ಪ್ರಿಯಾಂಕ್ ಖರ್ಗೆ ಹಾಕೊಂಡಿದ್ದಾರೆ. ಸರ್ಕಾರಿ ಕೆಲಸದಲ್ಲಿ ಜಾತಿ ತರಬಾರದು ಎಂದರು.
ಜೆಡಿಎಸ್ -ಬಿಜೆಪಿ ಮೈತ್ರಿ ಬಗ್ಗೆ ಪ್ರತಿಕ್ರಿಯಿಸಿ, ಈ ಎರಡು ಪಕ್ಷಗಳ ಮೈತ್ರಿ ಬಳಿಕ ಉಳಿದುಕೊಂಡಿರುವ ಏಕೈಕ ಜಾತ್ಯತೀತ ಪಕ್ಷ ಎಂದರೆ ಕಾಂಗ್ರೆಸ್ ಎಂದರು. ಇದೇ ವೇಳೆ ಸರ್ಕಾರ ಹೋದ್ರೆ, ಮುಸಲ್ಮಾನರು ನನ್ನ ಬಳಿಯೇ ಬರಬೇಕು ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಮುಸಲ್ಮಾನರಿಗೆ ಇವರ ಕೊಡುಗೆ ಏನು? ದೇವೇಗೌಡರ ಕೊಡುಗೆ ಇದೆ. ಮೀಸಲಾತಿ ವಿಚಾರ ಇರಲಿ, ಈದ್ಗಾ ಮೈದಾನ ವಿಚಾರ ಇರಲಿ ದೇವೇಗೌಡರ ಕೊಡುಗೆ ಸಾಕಷ್ಟು ಇದೆ. ಆದರೆ, ಕುಮಾರಸ್ವಾಮಿ ಕೊಡುಗೆ ಏನಿದೆ, ಒಂದಾದ್ರೂ ತೋರಿಸಿ ಎಂದು ಸವಾಲೆಸೆದರು.
ಇದನ್ನೂ ಓದಿ : ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬೃಹತ್ ಪ್ರತಿಭಟನೆ