ಹಾಸನ : ತಮ್ಮ ಅಧಿಕಾರ ಚಕ್ರಾಧಿಪತ್ಯ ಸ್ಥಾಪಿಸಲು ಪ್ರಯತ್ನಿಸಿ ಫಲ ಸಿಗದಿದ್ದಾಗ, ಜೆಡಿಎಸ್ ಮುಖಂಡರಿಂದ ನಾಟಕೀಯ ಪ್ರತಿಭಟನೆ ನಡೆಸುತ್ತಿರುವುದು ಎಷ್ಟು ಸರಿಯಾಗಿದೆ ಎಂದು ಕಾಂಗ್ರೆಸ್ ಮುಖಂಡ ದೇವರಾಜೇಗೌಡ ಪ್ರಶ್ನಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಹಾಸನ ಜಿಲ್ಲಾ ಸಹಕಾರಿ ಬ್ಯಾಂಕ್ ಚುನಾವಣೆ ಮುಗಿದಿರುತ್ತದೆ. ಈ ಚುನಾವಣೆಯು ಕೂಡ ಏಕ ಪಕ್ಷೀಯವಾಗಿರುತ್ತದೆ. ಇದರ ನಂತರ ನಗರಸಭೆ ಚುನಾವಣೆಯು ಕೂಡ ಚಾಲ್ತಿಯಲ್ಲಿದೆ. ನ.7ರಂದು ಹಾಸನದ ಸಂಜೀವಿನಿ ಸಹಕಾರಿ ಆಸ್ಪತ್ರೆಗೆ ಚುನಾವಣೆ ನಿಗದಿಯಾಗಿದೆ.
ಇಂತಹ ಸಾಮಾಜಿಕ ಕಳಕಳಿಯಿಂದ ಪ್ರಾರಂಭಿಸಿದ್ದ ಸಹಕಾರಿ ಆಸ್ಪತ್ರೆಯ ಆಡಳಿತ ವರ್ಗಕ್ಕೆ ಜೆಡಿಎಸ್ ಮುಖಂಡರುಗಳು ಅಕ್ರಮ ಪ್ರವೇಶ ಮಾಡಿ ಆಸ್ಪತ್ರೆಯ ಕಾರ್ಯ ಚಟುವಟಿಕೆಗಳನ್ನು ಅಲ್ಲೋಲ ಕಲ್ಲೋಲ ಮಾಡಿದ್ದಾರೆ ಎಂದು ದೂರಿದರು.
ದಳದ ಮುಖಂಡರುಗಳು ತಮ್ಮ ವೈಯಕ್ತಿಕ ಪ್ರತಿಷ್ಠೆಗಾಗಿ ಮತ್ತು ಡಿಸಿಸಿ ಬ್ಯಾಂಕ್ ಚುನಾವಣೆಯ ಪ್ರಕಾರ ಅಕ್ರಮವಾಗಿ ನಿರ್ದೇಶಕರ ಹುದ್ದೆಗಳನ್ನು ಆಕ್ರಮಿಸಬೇಕೆಂಬ ಉದ್ದೇಶಕ್ಕಾಗಿ ರಾಜಕೀಯ ರಂಗಿನಾಟಕ್ಕೆ ಕಾರಣವಾಗಿದೆ.
ಈ ಕಾರಣಕ್ಕಾಗಿ ಸಂಪೂರ್ಣ ಮತದಾರರ ಪಟ್ಟಿಯನ್ನು ತಿದ್ದುಪಡಿ ಮಾಡಲು ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಅವರು ನಿರಾಕರಿಸಿದಾಗ, ಉದ್ದೇಶ ಪೂರ್ವಕವಾಗಿ ಆಸ್ಪತ್ರೆಯ ಆಡಳಿತಾಧಿಕಾರಿ ಹಾಗೂ ಚುನಾವಣಾಧಿಕಾರಿಯ ವಿರುದ್ಧ ಕೂಡ ಪ್ರತಿಭಟನೆ ನಡೆಸಲಾಗಿದೆ ಎಂದರು.
ಈಗಾಗಲೇ ಜಿಲ್ಲೆಯಲ್ಲಿ ನೂರಾರು ಅಧಿಕಾರಿಗಳ ವರ್ಗಾವಣೆಯಲ್ಲಿ ಮೂಗು ತೂರಿಸುವ ಮೂಲಕ ತಮ್ಮ ಪಾರುಪತ್ಯವನ್ನು ಸ್ಥಾಪಿಸಲು ಪ್ರಯತ್ನಿಸಿದ್ದ ಜೆಡಿಎಸ್ ಮುಖಂಡರುಗಳು ಕೇವಲ ಒಬ್ಬ ಆಡಳಿತಾಧಿಕಾರಿಯನ್ನು ವರ್ಗಾವಣೆ ಮಾಡಿಸಲು ಅಶಕ್ತರಾಗಿದ್ದಾರೆ. ಎಸಿ ಕಚೇರಿಯ ಮುಂದೆ ಪ್ರತಿಭಟನೆ ಮಾಡಿರುವುದು ಎಷ್ಟು ಸರಿ? ಎಂದು ಆಕ್ರೋಶ ವ್ಯಕ್ತಪಡಿಸಿದರು.