ಹಾಸನ: ನೂತನ ಜಿಲ್ಲಾಧಿಕಾರಿ ಆರ್.ಗಿರೀಶ್ ನಗರ ಸಂಚಾರ ನಡೆಸಿ, ವಿವಿಧ ಪ್ರದೇಶಗಳಲ್ಲಿನ ಕುಂದುಕೊರತೆ ಪರಿಶೀಲಿಸಿದರು. ತೆರೆದ ಗುಂಡಿಗಳನ್ನು ಮುಚ್ಚುವಂತೆ ಹಾಗೂ ಸಾರ್ವಜನಿಕರಿಗೆ ತೊಂದರೆ ಆಗದಂತೆ ಕಾಮಗಾರಿಗಳನ್ನು ಬೇಗ ಮುಗಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ನಗರಸಭೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನಗರದ ಸಂತೇಪೇಟೆ ರಸ್ತೆಯಲ್ಲಿ ಸಾಗಿ ಕಾಮಗಾರಿ ವೀಕ್ಷಿಸಿದ ಗಿರೀಶ್, ನಂತರ ಹೊಸಲೈನ್ ರಸ್ತೆಯಲ್ಲಿ ಪೈಪ್‍ಲೈನ್ ಕಾಮಗಾರಿ ವೀಕ್ಷಿಸಿದರು. ಲೋಕೋಪಯೋಗಿ ಇಲಾಖೆ ವತಿಯಿಂದ ನಿರ್ಮಾಣವಾಗುತ್ತಿರುವ ರಸ್ತೆಗಳು ಹಾಸನಾಂಬ ದೇವಸ್ಥಾನದ ಜಾತ್ರೆ ಆರಂಭಗೊಳ್ಳುವ ಮುಂಚಿತವಾಗಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಅಲ್ಲದೇ, ಕಾಂಕ್ರೀಟ್ ರಸ್ತೆ ನಿರ್ಮಾಣದ ವೇಳೆ ಗುಣಮಟ್ಟ ಕಾಯ್ದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇದೇ ವೇಳೆ ಡಬಲ್ ಟ್ಯಾಂಕ್ ರಸ್ತೆ ಅಭಿವೃದ್ಧಿ ಗಮನಿಸಿದ ಅವರು, ಎಲ್ಲಾ ಪ್ರಮುಖ ರಸ್ತೆಗಳ ಅಭಿವೃದ್ಧಿ ಕೆಲಸವನ್ನು ಶೀಘ್ರವೇ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಹೇಳಿದರು. ಬಳಿಕ ಸಾಲಗಾಮೆಯ ವರ್ತುಲ ರಸ್ತೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ, ನಗರದಾದ್ಯಂತ ರಸ್ತೆ ಅಗೆದಿರುವ ಕಡೆ ಬೇಗ ಪೈಪ್‍ಲೈನ್ ಅಳವಡಿಕೆ ಪೂರ್ಣಗೊಳಿಸಿ, ಅಭಿವೃದ್ಧಿ ಕೆಲಸ ಮುಗಿಸಬೇಕು ಎಂದು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಸೂಚನೆ ನೀಡಿದರು.
ಇದೇ ವೇಳೆ ನಗರದ ಹುಣಸಿನಕೆರೆಯ ಹಬೀಬಿಯಾ ಸಾ ಮೀಲ್ ರಸ್ತೆ, ಮೆಹಬೂಬ್ ನಗರಗಳಿಗೆ ಭೇಟಿ ನೀಡಿದ ಅವರು, ಗುಂಡಿಗಳನ್ನು ತಕ್ಷಣವೇ ಮುಚ್ಚಿ, ಅಪಾಯಕಾರಿ ಸಂಚಾರಿ ಮಾರ್ಗಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಕ್ರಮ ವಹಿಸುವಂತೆ ಸೂಚಿಸಿದ್ದಾರೆ.