ಹಾಸನ: ಉದ್ದೇಶಿತ ಹಾಸನ ವಿಮಾನ ನಿಲ್ದಾಣ ಕಾಮಗಾರಿ ಪ್ರಾರಂಭಿಸುವ ಕುರಿತು ಕಡತ ಮಂಡಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅಂಕಿತ ಹಾಕುವುದರೊಂದಿಗೆ ದಶಕದ ಕನಸಿಗೆ ಜೀವ ಬಂದಿದ್ದು, ಹಾಸನ ಜನರಿಗೆ ಖುಷಿ ತಂದಿದೆ.
ಜ.25 ರಂದು ವಿಮಾನ ನಿಲ್ದಾಣ ಯೋಜನಗೆ ಕಾಯಕಲ್ಪ ಕಲ್ಪಿಸುವಂತೆ ಮುಖ್ಯಮಂತ್ರಿಯವರಿಗೆ ಶಾಸಕ ಪ್ರೀತಂ ಜೆ.ಗೌಡ ಕೋರಿಕೆ ಸಲ್ಲಿಸಿದ್ದರು. ಇಂದು ಸಿಎಂರನ್ನು ಭೇಟಿ ಮಾಡಿ ನನೆಗುದಿಗೆ ಬಿದ್ದಿರುವ ವಿಮಾನ ನಿಲ್ದಾಣ ಯೋಜನೆಗೆ ಕಾಯಕಲ್ಪ ಕಲ್ಪಿಸುವಂತೆ ಮನವಿ ಮಾಡಿದರು. ಈ ಕುರಿತು ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆಯ ಮುಖ್ಯಕಾರ್ಯದರ್ಶಿಗೆ ಸ್ಪಷ್ಟ ನಿರ್ದೇಶನ ನೀಡಿ, ಕಡತ ಪೂರ್ಣಗೊಳಿಸುವಂತೆ ಸಿಎಂ ಸೂಚನೆ ನೀಡಿದ್ದಾರೆ.
ವಿಮಾನ ನಿಲ್ದಾಣಕ್ಕೆ ಅಗತ್ಯ ಭೂ ಸ್ವಾಧೀನ ಪೂರ್ಣಗೊಂಡಿದ್ದರೂ, ಕಾಮಗಾರಿ ಪ್ರಾರಂಭಗೊಳ್ಳದೆ ನನೆಗುದಿಗೆ ಬಿದ್ದಿದೆ. ಹಾಸನ ನಗರ ಮೈಸೂರು, ಶಿವಮೊಗ್ಗ, ಬೆಂಗಳೂರು, ಮಂಗಳೂರಿಗೆ ಸಂಪರ್ಕ ಕೊಂಡಿಯಾಗಿದ್ದು, ವಿಮಾನ ನಿಲ್ದಾಣ ನಿರ್ಮಾಣದಿಂದ ಜನತೆಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಶಾಸಕರು ಪತ್ರ ಬರೆದಿದ್ದರು. ಹೀಗಿದ್ದರೂ, ನನೆಗುದಿಗೆ ಬಿದ್ದಿರುವುದು ಬೇಸರದ ಸಂಗತಿ ಎಂದು ಶಾಸಕ ಪ್ರೀತಂ ಗೌಡ ಸಿಎಂಗೆ ಬರೆದ ಪತ್ರದಲ್ಲಿ ತಿಳಿಸಿದ್ದಲ್ಲದೆ, ಶೀಘ್ರವಾಗಿ ಕಾಮಗಾರಿ ಕೈಗೆತ್ತಿಕೊಳ್ಳಲು ಕ್ರಮ ಕೈಗೊಳ್ಳುವಂತೆ ಪತ್ರದಲ್ಲಿ ವಿನಂತಿಸಿದರು.
ದೇವೇಗೌಡರಿಂದ ಪ್ರಧಾನಿಗೆ ಮನವಿ
ಇನ್ನು ಈ ಹಿಂದೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ವಿಮಾನ ನಿಲ್ದಾಣ ಕಾಮಗಾಗಿ ಪ್ರಾರಂಭಿಸುವ ಕುರಿತು ಕೇಂದ್ರ ಸಚಿವ ಹರ್ದೀಪ್ ಎಸ್.ಪುರಿಯವರಿಗೆ ಪತ್ರದ ಮೂಲಕ ಮನವಿ ಮಾಡಿದ್ದರು. ಹರ್ದೀಪ್ ಎಸ್.ಪುರಿ ಸಹ ಪ್ರಧಾನಿ ನರೇಂದ್ರ ಮೋದಿಯರಿಗೆ ಪತ್ರ ಬೆರೆದಿದ್ದರು.
ಮನವಿಗೆ ಸ್ಪಂದಿಸಿರುವ ಪ್ರಧಾನಿ ಹಾಸನ ವಿಮಾನ ನಿಲ್ದಾಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ರಾಜ್ಯ ಸರ್ಕಾರಕ್ಕೆ ಸೂಚಿಸಿದ ಹಿನ್ನೆಲೆ, ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಹಾಸನ ವಿಮಾನ ನಿಲ್ದಾಣ ಕಾಮಗಾರಿಯನ್ನು ಕೈಗೊಳ್ಳುವ ವಿಷಯವನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದರು. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ, ಪ್ರಧಾನಿ ನರೇಂದ್ರ ಮೋದಿ,ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.