ಹಾಸನ: ಸಂವಿಧಾನಾತ್ಮಕ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಡೆಸಿದ ಪಾದಯಾತ್ರೆಗೆ ನಿಷೇಧಾಜ್ಞೆ ಹೇರಿದ್ದು ಹಾಗೂ ಆ ವೇಳೆ ಸಂಘಟನೆ ಅಧ್ಯಕ್ಷೆ ವರಲಕ್ಷ್ಮಿ ಹಾಗೂ ಸದಸ್ಯರ ಮೇಲೆ ದಾಖಲಾಗಿರುವ ಅಪರಾಧ ಪ್ರಕರಣಗಳನ್ನು ವಾಪಸ್ ಪಡೆಯಲು ಆಗ್ರಹಿಸಿ ತಹಸೀಲ್ದಾರ್ ಕಚೇರಿ ಮುಂಭಾಗ ರಾಜ್ಯ ಅಂಗನವಾಡಿ ನೌಕರರ ಸಂಘ ಪ್ರತಿಭಟನೆ ನಡೆಸಿತು.
ರಾಜ್ಯ ಸಮಿತಿಯಿಂದ ಶಾಲಾ ಪೂರ್ವ ಶಿಕ್ಷಣ ಅಂಗನವಾಡಿಗಳನ್ನು ಉಳಿಸಲು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಡಿಸೆಂಬರ್ 10ರಂದು ತುಮಕೂರಿನಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸಿದ ವೇಳೆ ಸರ್ಕಾರ ನಿಷೇಧಾಜ್ಞೆ ಹೇರಿದ್ದು ಖಂಡನೀಯ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಸಂಘಟನೆ ರಾಜ್ಯಾಧ್ಯಕ್ಷೆ ಎಸ್.ವರಲಕ್ಷ್ಮಿ ಸೇರಿದಂತೆ ಸಂಘದ ಸದಸ್ಯರ ಮೇಲೆ ಮಾರಕಾಸ್ತ್ರ, ಸ್ಪೋಟಕ ವಸ್ತುಗಳನ್ನು ಒಯ್ಯುತ್ತಿದ್ದಾರೆ ಎಂದು ಏಳು ಅಪರಾಧ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಪುಷ್ಪಾ ಹೇಳಿದರು.
ಇದು ಸರ್ಕಾರಕ್ಕೆ ಶೋಭೆ ತರುವ ಕೆಲಸವಲ್ಲ. ತಮ್ಮ ವೇತನಕ್ಕಾಇಗ, ಮೂಲ ಸೌಲಭ್ಯಗಳಿಗಾಗಿ ಹೋರಾಟ ನಡೆಸುತ್ತಿದ್ದರೆ, ಸರ್ಕಾರ ನಮ್ಮ ಮೇಲೆಯೇ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಬಡ ಅಂಗನವಾಡಿ ಮಹಿಳೆಯರ ಶಾಂತಿಯುತ ಹೋರಾಟಕ್ಕೆ ಅಡ್ಡಿಪಡಿಸಿದೆ. ನಮ್ಮ ಬೇಡಿಕೆಗಳ ಈಡೇರಿಕೆಗೆ ಗಮನ ಸೆಳೆಯಲು ಇರುವ ಮಾರ್ಗ ಮತ್ತು ವಿಧಾನಗಳನ್ನೇ ಕಸಿದುಕೊಂಡಿದೆ ಎಂದು ಆತಂಕ ವ್ಯಕ್ತಪಡಿಸಿದರು.