ಹಾಸನ: ಕಾರ್ಮಿಕರ ತುಟ್ಟಿಭತ್ಯೆ ತಡೆಹಿಡಿದು, ಕೈಗಾರಿಕಾ ಹಾಗೂ ಕಾರ್ಮಿಕ ಕಾನೂನುಗಳನ್ನು ಮಾಲೀಕರ ಪರವಾಗಿ ತಿದ್ದುಪಡಿ ಮಾಡಿದ್ದಾರೆ ಎಂದು ವಿರೋಧಿಸಿ ಸಿಐಟಿಯು ನೇತೃತ್ವದಲ್ಲಿ ಹಾಸನ ನಗರದ ಅಂಬೇಡ್ಕರ್ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಲಾಯಿತು.
ಕೊರೊನಾ ಮಹಾಪಿಡುಗು ಹಾಗೂ ಆರ್ಥಿಕ ಬಿಕ್ಕಟ್ಟಿನಿಂದಾಗಿ ಈಗಾಗಲೇ ಸಂಕಷ್ಟಕ್ಕೀಡಾಗಿರುವ ಕಾರ್ಮಿಕರಿಗೆ ಪರಿಹಾರ ಒದಗಿಸಬೇಕಾಗಿರುವ ಸರ್ಕಾರ ಮಾಲೀಕರ ಒತ್ತಡಕ್ಕೆ ಮಣಿದು ಕಾರ್ಮಿಕರ ವ್ಯತ್ಯಸ್ಥ ತುಟ್ಟಿಭತ್ಯೆ ತಡೆಹಿಡಿದಿದೆ. ಇದರಿಂದಾಗಿ ಸರ್ಕಾರ ಈಗಾಗಲೇ ಸಂಕಷ್ಟದಲ್ಲಿರುವ ಕಾರ್ಮಿಕರ ಪ್ರತೀ ತಿಂಗಳ ವೇತನದಲ್ಲಿ 418 ರೂ. ಕಡಿತಗೊಳಿಸಲಿದೆ. ಈ ನಿರ್ಧಾರದಿಂದ ಕಾರ್ಮಿಕರನ್ನು ಮತ್ತಷ್ಟು ಶೋಷಣೆ ಮಾಡಿ ಲಾಭ ಮಾಡಿಕೊಳ್ಳಲು ಮಾಲೀಕರಿಗೆ ಅವಕಾಶ ಮಾಡಿಕೊಟ್ಟಂತಾಗಿದೆ ಎಂದು ದೂರಿದರು.
ರಾಜ್ಯ ಸರ್ಕಾರ ಕೂಡಲೇ ತುಟ್ಟಿಭತ್ಯೆ ತಡೆಹಿಡಿದಿರುವ ತನ್ನ ಆದೇಶವನ್ನು ಕೂಡಲೇ ಹಿಂಪಡೆಯಬೇಕು. ಈಗ ರಾಜ್ಯ ಸರ್ಕಾರ ಆ ಮಿತಿಯನ್ನು 300ಕ್ಕೆ ಹೆಚ್ಚಿಸಿ ಕೈಗಾರಿಕಾ ವಿವಾದಗಳ ಕಾಯ್ದೆ ಕಲಂ 25(ಕೆ) ತಿದ್ದುಪಡಿ ಮಾಡಿದೆ. ಇದರಿಂದಾಗಿ ರಾಜ್ಯದ ಶೇಕಡ 90 ರಷ್ಟು ಕಾರ್ಖಾನೆಗಳಿಗೆ ಲೇ-ಆಫ್, ರಿಟ್ರೆಂಚ್ ಮಾಡಲು ಅಥವಾ ಕಾರ್ಖಾನೆ ಮುಚ್ಚಲು ಸರ್ಕಾರದ ಅನುಮತಿ ಬೇಡವಾಗಲಿದೆ. ಪರಿಣಾಮವಾಗಿ ಮಾಲೀಕರು ಬೇಕೆಂದಾಗ ಕಾರ್ಖಾನೆ ಆರಂಭಿಸಿ ಬೇಡವಾದಾಗ ಕಾರ್ಖಾನೆ ಮುಚ್ಚಲು ಅನುವಾಗಲಿದೆ. ಈ ತಿದ್ದುಪಡಿಯಿಂದಾಗಿ ಕಾರ್ಮಿಕರು ಕೆಲಸ ಕಳೆದುಕೊಂಡು ಬೀದಿಪಾಲಾಗಲಿದ್ದಾರೆ ಹಾಗೂ ನಿರುದ್ಯೋಗದ ಹೆಚ್ಚಳಕ್ಕೆ ಇದು ನಾಂದಿಯಾಗಲಿದೆ ಅದನ್ನು ಕೂಡಲೇ ಹಿಂಪಡಿಯಬೇಕೆಂದು ಒತ್ತಾಯಿಸಿದರು.