ಹಾಸನ : ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಹಾಸನ ಜಿಲ್ಲೆಯಲ್ಲಿ ಮೂವರು ವ್ಯಕ್ತಿಗಳನ್ನು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಜಿಲ್ಲೆಯ ಶ್ರವಣಬೆಳಗೊಳ ತಾಲೂಕಿನ ಬೆಕ್ಕ ಗ್ರಾಮ ಪಂಚಾಯತ್‌ನ ಕೇಶವ ಹಾಗೂ ಅದೇ ಗ್ರಾಮದ ನಾರಾಯಣಪ್ಪ ಮತ್ತು ಪರೀಕ್ಷೆ ಬರೆದಿದ್ದ ಆತನ ಮಗ ವೇಣುಗೋಪಾಲನನ್ನ ಸಿಐಡಿ ಅಧಿಕಾರಿಗಳು ಇಂದು ಬೆಳಗ್ಗೆ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಪಿಎಸ್ಐ ಅಕ್ರಮ ಹಗರಣಕ್ಕೆ ಸಂಬಂಧಪಟ್ಟಂತೆ ದಿನದಿಂದ ದಿನಕ್ಕೆ ಒಬ್ಬಿಬ್ಬರು ಸಿಐಡಿ ಅಧಿಕಾರಿಗಳಿಗೆ ಸಿಕ್ಕಿ ಬೀಳುತ್ತಿದ್ದಾರೆ, ಅದೇ ರೀತಿ ಹಾಸನ ಜಿಲ್ಲೆಯಲ್ಲಿ ಕೂಡ ಪಿಎಸ್ಐ ಹಗರಣದ ಕಿಂಗ್ಪಿನ್ಗಳಿದ್ದಾರೆ ಎಂಬ ಮಾಹಿತಿಯನ್ನು ಮೂರು ದಿನದ ಹಿಂದೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಮಾರ್ಮಿಕವಾಗಿ ನುಡಿದಿದ್ದರು.
ಸಿಐಡಿಗೆ ಸಿಕ್ಕಿಬಿದ್ದಿರುವ ಆರೋಪಿ ಕೇಶವ ಸಂಬಂಧಿಕರೊಬ್ಬರು ಈ ಹಿಂದೆ ಹಾಸನದಲ್ಲಿ ಡಿವೈಎಸ್ಪಿಯಾಗಿ ಸೇವೆ ಸಲ್ಲಿಸಿದ್ದರು. ಈಗ ಮೈಸೂರಿನ ತರಬೇತಿ ಕೇಂದ್ರಕ್ಕೆ ವರ್ಗಾವಣೆಯಾಗಿದ್ದಾರೆ. ಮತ್ತೊಬ್ಬ ಸಂಬಂಧಿಕ ವೃತ್ತ ನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನೊಬ್ಬ ಮಹಿಳಾ ಸಂಬಂಧಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಹೀಗಾಗಿ, ಕುಟುಂಬದ ಸಾಕಷ್ಟು ಮಂದಿ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಮೊನ್ನೆ ಪರೀಕ್ಷೆ ಬರೆದಿದ್ದ ವೇಣುಗೋಪಾಲ್ ಆಯ್ಕೆ ಪ್ರಕ್ರಿಯೆಯಲ್ಲಿ ಕೇಶವ ಎಂಬುವರು ಡೀಲ್ ಮಾಡಿ ಪರೀಕ್ಷೆ ಪಾಸ್ ಮಾಡಿಸಿದ್ದರು ಎಂಬ ಆರೋಪ ಕೇಳಿ ಬಂದಿದೆ.
ಇದನ್ನೂ ಓದಿ: ಪಿಎಸ್ಐ ಪರೀಕ್ಷೆ ಅಕ್ರಮ: ಕಿಂಗ್‌ಪಿನ್ ಆರ್.ಡಿ.ಪಾಟೀಲ್ ಜೈಲಿಗೆ ಸ್ಥಳಾಂತರ