ಹಾಸನ: ಇಂದಿನಿಂದ ಎರಡು ದಿನಗಳ ಕಾಲ ಜಿಲ್ಲೆಯಲ್ಲಿ ಅಖಿಲ ಭಾರತ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಜರುಗುತ್ತಿದ್ದು, ಗಣ್ಯರು ಜಿಲ್ಲಾ ಕ್ರೀಡಾಂಗಣದಲ್ಲಿ ರಾಷ್ಟ್ರ ಧ್ವಜಾರೋಹಣವನ್ನ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ರಾಷ್ಟ್ರ ಧ್ವಜಾರೋಹಣವನ್ನ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಶಂಭುನಾಥಸ್ವಾಮೀಜಿ, ಮಕ್ಕಳ ಕನ್ನಡ ಸಾಹಿತ್ಯ ಪರಿಷತ್ನ ಧ್ವಜಾರೋಹಣವನ್ನ ರಾಜ್ಯಾಧ್ಯಕ್ಷ ಚ.ನಾ.ಅಶೋಕ್ ಸೇರಿದಂತೆ ಹಲವು ಗಣ್ಯರು ನೇರವೇರಿಸಿದ್ರು. ಇನ್ನು ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಸಮ್ಮೇಳನದ ಸರ್ವಾಧ್ಯಕ್ಷೆ ತುಮಕೂರು ಜಿಲ್ಲೆಯ ಕೀರ್ತನಾ ನಾಯಕ್, ಸಹ ಅಧ್ಯಕ್ಷರಾದ ಮಂಡ್ಯ ಜಿಲ್ಲೆಯ ರೇವಂತ್ ರಾಜೀವ್, ದಕ್ಷಿಣ ಕನ್ನಡ ಜಿಲ್ಲೆಯ ಪ್ರದ್ಯುಮ್ನ ಮೂರ್ತಿ ಮತ್ತು ದೆಹಲಿಯ ಅಭಿಷೇಕ್ ಉಭಾಳೆ ಅವರಿಗೆ ಮೈಸೂರು ಪೇಟ ತೊಡಿಸಿ, ಅಧ್ಯಕ್ಷರುಗಳನ್ನ ಪುಷ್ಪಾಲಂಕೃತ ಬೆಳ್ಳಿ ರಥದಲ್ಲಿ ಮೆರವಣಿಗೆ ನಡೆಸಲಾಯಿತು.
ಮಹನೀಯರ ವೇಷ ಧರಿಸಿದ ವಿದ್ಯಾರ್ಥಿಗಳು ಎಲ್ಲರ ಗಮನ ಸೆಳೆದರು. ಸೋಮನ ಕುಣಿತ, ಕರಗ ಕುಣಿತ, ಚರ್ಮ ವಾದ್ಯ ತಂಡ, ಯಕ್ಷಗಾನ, ಕೀಲು ಕುದುರೆ, ಡೊಳ್ಳು ಕುಣಿತ, ಕೋಲಾಟ, ಕಂಸಾಳೆ ತಂಡಗಳು ನೋಡುಗರ ಕಣ್ಮನ ಸೆಳೆಯಿತು. ಮೆರವಣಿಗೆ ಎನ್. ಆರ್. ವೃತ್ತ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ, ಶಂಕರಮಠ ರಸ್ತೆ, ಮಹಾತ್ಮ ಗಾಂಧಿ ರಸ್ತೆ ಮೂಲಕ ಸಮ್ಮೇಳನ ನಡೆಯುವ ಜಿಲ್ಲಾ ಕ್ರೀಡಾಂಗಣ ತಲುಪಿತು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಚ.ನ. ಅಶೋಕ್, ದೇಶ ಕಟ್ಟುವ ಮಕ್ಕಳ ಸಾಹಿತ್ಯ ಸಮ್ಮೇಳನ ಐತಿಹಾಸಿಕವಾಗಿದ್ದು, ಇಂದಿನ ವ್ಯವಸ್ಥೆಯಲ್ಲಿ ಮಕ್ಕಳಿಂದಷ್ಟೇ ಬದಲಾವಣೆ ಬಯಸಲು ಸಾಧ್ಯ ಎಂದರು. ಕವನ ಸಂಕಲನ ಬಿಡುಗಡೆ ಸಮ್ಮೇಳನದಲ್ಲಿ ಯುವ ಕವಿಗಳ ನವಿಲುಗರಿ, ಪದ್ಮಾರಾಗ, ಚಿಗುರು, ಸೌಗಂಧಿಕ, ಮೌಲ್ಯ, ಚಿತ್ತಾರ ಸೇರಿದಂತೆ ಹಲವು ಕವನ ಸಂಕಲನಗಳನ್ನು ನಿರ್ಮಲಾನಂದನಾಥ ಸ್ವಾಮೀಜಿ, ಬರಗೂರು ರಾಮಚಂದ್ರಪ್ಪ, ಸಮ್ಮೇಳನದ ಅಧ್ಯಕ್ಷೆ ಬಿಡುಗಡೆ ಮಾಡಿದರು.
ಈ ವೇಳೆ ದೆಹಲಿ, ಹರಿಯಾಣ, ಮಹಾರಾಷ್ಟ್ರ, ಕೇರಳ, ಆಂದ್ರಪ್ರದೇಶ, ಗೋವಾ, ಮುಂಬೈ, ಮದ್ರಾಸ್ನಿಂದ ಮಕ್ಕಳು ಬಂದಿದ್ದರು. ವಿಧಾನ ಪರಿಷತ್ ಸದಸ್ಯ ಎಂ.ಎ ಗೋಪಾಲಸ್ವಾಮಿ, ಆದಿಚುಂಚನಗಿರಿ ಶಾಖಾ ಮಠದ ಶಂಭುನಾಥ ಸ್ವಾಮೀಜಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಪ್ರಕಾಶ್, ಪತ್ರಕರ್ತ ಬಿ.ಆರ್.ಉದಯ್ ಕುಮಾರ್, ಮಕ್ಕಳ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸುರೇಶ್ ಗುರೂಜಿ, ಶಿಕ್ಷಣಾಧಿಕಾರಿ ರುದ್ರೇಶ್, ಹೇಮಾವತಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ವೆಂಕಟೇಶ್, ಸಮ್ಮೇಳನದ ಸಹ ಅಧ್ಯಕ್ಷರಾದ ರೇವಂತ್ ರಾಜೀವ್, ಪ್ರದ್ಯುಮ್ನ ಮೂರ್ತಿ, ಅಭಿಷೇಕ್ ಉಭಾಳೆ ಹಾಜರಿದ್ದರು.