ಹಾಸನ : ಕಾರೊಂದಕ್ಕೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮಗು ಹಾಗೂ ಮಹಿಳೆ ಸಾವನ್ನಪ್ಪಿರುವ ದಾರುಣ ಘಟನೆ ಹಾಸನ ತಾಲೂಕಿನ ಸಂಕೇನಹಳ್ಳಿ ಬಳಿ ನಡೆದಿದೆ.
ಮತ್ತೊಂದು ಬಸ್‍ನ್ನು ಓವರ್ ಟೇಕ್ ಮಾಡಲು ಹೋಗಿ ಎದುರಿನಿಂದ ಬರುತ್ತಿದ್ದ ಸ್ವಿಫ್ಟ್ ಕಾರಿಗೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಐವರ ಪೈಕಿ ಒಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮಗು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಸಾವನ್ನಪ್ಪಿದೆ. ಇನ್ನು ಮೂವರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತಕ್ಕೊಳಗಾದವರು ಬೆಂಗಳೂರಿನ ಕೆಂಗೇರಿ ನಿವಾಸಿಗಳು ಎನ್ನಲಾಗಿದ್ದು, ಮೂಡಿಗೆರೆಯಲ್ಲಿ ಸಂಬಂಧಿಕರೊಬ್ಬರು ಮೃತಪಟ್ಟಿದ್ದು, ಅವರ ಅಂತಿಮ ದರ್ಶನಕ್ಕೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ. ಇನ್ನು ದುರ್ಘಟನೆಯಲ್ಲಿ ಕಾರು ಸಂಪೂರ್ಣ ನಜ್ಜು ಗುಜ್ಜಾಗಿದ್ದು, ಕಾರಿನಲ್ಲಿದ್ದ ಉಳಿದ ಮೂವರ ಸ್ಥಿತಿ ಚಿಂತಾಜನಕ ಆಗಿದೆ ಎಂದು ಹೇಳಲಾಗಿದೆ. ಈ ಘಟನೆಗೆ ಕೆಎಸ್ಆರ್ಟಿಸಿ ಬಸ್ ಚಾಲಕನೇ ಕಾರಣ ಎಂದು ಆರೋಪಿಸಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಪಘಾತದ ನಂತರ ಬಸ್ ಚಾಲಕ ಪರಾರಿಯಾಗಿದ್ದಾನೆ.