ಹಾಸನ: ಇಂಜಿನಿಯರ್ ಕೆ.ಆರ್. ಕವಿತಾ ಅವರ ಮೇಲಿನ ಸುಳ್ಳು ಆಪಾದನೆಯನ್ನು ಕೂಡಲೇ ರದ್ದು ಮಾಡಿ ಸಕಲೇಶಪುರದ ಪುರಸಭೆ ಭಾಗದಲ್ಲಿಯೇ ಕೆಲಸ ಮಾಡಲು ಅವಕಾಶ ಕಲ್ಪಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಸೇನೆಯಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಸಕಲೇಶಪುರ ಪುರಸಭೆ ಇಂಜಿನಿಯರ್ ಕವಿತಾ ಕೆ.ಆರ್. ರವರ ಕೆಲಸಕ್ಕೆ ತೊಂದರೆ ನೀಡಲು ಕೆಲ ಗುತ್ತಿಗೆದಾರರು ಮತ್ತು ರಾಜಕಾರಣಿಗಳು ಸುಳ್ಳು ಆಪಾದನೆಗಳನ್ನು ಮಾಡಿದ್ದಾರೆ. ಇವರ ನಿಯೋಜನೆಯನ್ನು ರದ್ದುಗೊಳಿಸಿ ಸಕಲೇಶಪುರ ಪುರಸಭೆಯಲ್ಲಿ ಕರ್ತವ್ಯ ನಿರ್ವಹಿಸಲು ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಕಳೆದ ಕೆಲವು ದಿನಗಳ ಹಿಂದೆ ಒಂದು ದೂರವಾಣಿ ಸಂವಾದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಕವಿತಾ ಅವರು ಗುತ್ತಿಗೆದಾರರ ಕೊಲೆಗೆ ಸಂಚು ಹೂಡುತ್ತಿದ್ದಾರೆ ಎಂದು ವದಂತಿ ಹಬ್ಬಿಸುವ ಭಾರೀ ಪ್ರಯತ್ನ ಮಾಡಲಾಯಿತು. ಆದರೆ ಇದು ಪೂರ್ವನಿಯೋಜಿತ ರಾಜಕೀಯ ಸಂಚಿಗೆ ಒಬ್ಬ ನಿಷ್ಠಾವಂತ ಅಧಿಕಾರಿಯನ್ನು ಬಲಿ ನೀಡುವಂತಿದೆ. ಕವಿತಾ ಅವರು ಮೂಲತಃ ಗ್ರಾಮೀಣ ಭಾಗದ ಮಹಿಳೆ ಮತ್ತು ತಮ್ಮ ಅಧಿಕಾರ ಅವಧಿಯಲ್ಲಿ ಯಾವುದೇ ಒತ್ತಡಗಳಿಗೆ ಮಣಿಯದೆ ಸಕಲೇಶಪುರ ನಗರದಲ್ಲಿ ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಸಕಲೇಶಪುರ ಭಾಗದ ಜನಸಾಮಾನ್ಯರಿಗೆ ಇಂತಹ ಅಧಿಕಾರಿ ಅವಶ್ಯಕತೆ ಬಹಳವಿದೆ ಎಂದರು.
ಈ ಹಿಂದೆ ಒಬ್ಬ ರಾಜಕೀಯ ಮುಖಂಡ ಹೇಳಿದ ವ್ಯಕ್ತಿಗೆ ಪುರಸಭೆಯ ಗುತ್ತಿಗೆಯನ್ನು ನೀಡುವ ದ್ವೇಷದ ಹಿನ್ನೆಲೆ ಕವಿತಾ ಅವರನ್ನು ಗುರಿಯಾಗಿಸಿ ಅವರನ್ನು ಕೆಲಸದಿಂದ ತೆಗೆಯಬೇಕೆಂಬ ಕುತಂತ್ರ ಇದಾಗಿದೆ ಎಂದು ಆರೋಪಿಸಿದರು.
ಸಾರ್ವಜನಿಕರ ಹಿತದೃಷ್ಟಿಯಿಂದ ಕವಿತಾ ಅವರನ್ನು ಸಕಲೇಶಪುರ ಪುರಸಭೆಯಲ್ಲಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡಬೇಕಾಗಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.