ಹಾಸನ: 'ಕೈಯಾರ್ಗು ಕೊಡಬೇಡ, ಅನ್ನಕ್ಕಂತು ನಿಂಗೆಲ್ಲಿ ಹೋದ್ರು ತೊಂದರೆ ಇಲ್ಲ. ದೇಶದ ಉತ್ತುಂಗ ಶಿಖರಕ್ಕೆ ಸಾಧನೆ ಮಾಡ್ತೀಯಾ' ಅಂತ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಅವರಿಗೆ ವ್ಯಕ್ತಯೊಬ್ಬರು ಗಿಣಿ ಶಾಸ್ತ್ರ ಹೇಳಿದ್ದಾರೆ.
ಹೌದು, ಇಂದು ಹಾಸನಾಂಬ ದರ್ಶನಕ್ಕೆ ಆಗಮಿಸಿದ ಸಿ ಟಿ ರವಿ ಅವರು ದೇವಿಯ ದರ್ಶನ ಪಡೆಯುವ ಮುನ್ನ ರಸ್ತೆ ಬದಿ ಕುಳಿತಿದ್ದ ಗಿಣಿ ಶಾಸ್ತ್ರದವನ ನೋಡಿ ನನಗೂ ಶಾಸ್ತ್ರ ಹೇಳ್ತೀಯೇನಪ್ಪ? ಅಂತ ಗಿಣಿ ಶಾಸ್ತ್ರದ ಮುಂದೆ ಕುಳಿತು ಕವಡೆ ಹಾಕಿಸಿ ಶಾಸ್ತ್ರ ಕೇಳಿಯೇ ಬಿಟ್ರು.
ಭವಿಷ್ಯ ತಿಳಿದ ಸಿ ಟಿ ರವಿ: ಹಾಸನದ ಸಂತೆಪೇಟೆ ಸಮೀಪದ ರಸ್ತೆಯ ಬದಿಯಲ್ಲಿ ಕುಳಿತಿದ್ದ ಗಿಣಿಶಾಸ್ತ್ರದವರ ಮುಂದೆ ತವೊಬ್ಬ ರಾಷ್ಟ್ರಮಟ್ಟದ ನಾಯಕ ಎಂಬುದನ್ನು ಮರೆತು ರಸ್ತೆ ಬದಿಯಲ್ಲಿ ಕುಳಿತು ಗಿಣಿ ಶಾಸ್ತ್ರ ಕೇಳಿ ತಮ್ಮ ಭವಿಷ್ಯವನ್ನು ತಿಳಿದುಕೊಂಡರು.
ರಾಷ್ಟ್ರ ಮಟ್ಟದಲ್ಲಿಯೇ ಉನ್ನತ ಸ್ಥಾನ: ಸಿ ಟಿ ರವಿ ಶಾಸ್ತ್ರ ಕೇಳಲು ಕುಳಿತಂತೆಯೇ ಗಿಣಿ ತನ್ನ ಗೂಡಿನಿಂದ ಹೊರಬಂದು ಶಾಸ್ತ್ರ ಇಡುವನ ಮುಂದೆ ಇದ್ದ ಒಂದು ಎಲೆಯನ್ನು ಎತ್ತಿ ಕೊಟ್ಟು ಮತ್ತೆ ಗೂಡು ಸೇರಿತು. ಗಿಣಿ ಶಾಸ್ತ್ರದ ವ್ಯಕ್ತಿ ಮತ್ತೆ ಅದನ್ನು ತೆಗೆದು ನೋಡಿ, 'ತಾಯಿ ನುಡಿದವಳೇ. ತಾಯಿ ನುಡಿದವಳೇ.. ನಿನ್ನ ಕೈಯನ್ನು ಯಾರಿಗೂ ಕೊಡಬೇಡ, ಎಲ್ಲೇ ಹೋದರೂ ನಿನಗೆ ಅನ್ನದ ಋಣ ಇದೆ. ಅದನ್ನ ಮರಿಬೇಡ. ನಿನ್ನ ಕೈಯನ್ನು ಯಾರಿಗೂ ಕೊಡಬೇಡ. ಹಸ್ತದಲ್ಲಿ ನಿನ್ನ ಭವಿಷ್ಯ ಅಡಗಿದೆ. ಮುಂದಿನ ದಿನಗಳಲ್ಲಿ ನಿನಗೆ ರಾಷ್ಟ್ರ ಮಟ್ಟದಲ್ಲಿಯೇ ಉನ್ನತ ಸ್ಥಾನ ಸಿಗಲಿದೆ' ಅಂತ ಗಿರೀಶ್ ಎಂಬ ಗಿಣಿ ಶಾಸ್ತ್ರದ ವ್ಯಕ್ತಿ ಸಿಟಿ ರವಿ ಅವರಿಗೆ ಭವಿಷ್ಯ ಹೇಳಿದ್ದಾರೆ.
ಹಣ ನೀಡಿ ದೇವಿಯ ದರ್ಶನ: ಗಿಣಿ ಶಾಸ್ತ್ರದವನ ಮಾತು ಕೇಳಿ ಎಷ್ಟು ವರ್ಷಗಳಿಂದ ನೀವು ಈ ಶಾಸ್ತ್ರ ಹೇಳುವ ಕೆಲಸ ಮಾಡುತ್ತಿದ್ದೀರಿ? ನೀವು ಎಲ್ಲಿಯವರು? ಎಂದು ವಿಚಾರಿಸಿ, ನಂತರ ಅವರು ಹಣವನ್ನು ನೀಡಿ ದೇವಿಯ ದರ್ಶನ ಪಡೆದರು.