ಹಾಸನ : ಇಲ್ಲಿನ ಮಣ್ಣಿನ ಗುಣವೇ ಹಾಗೇ. ಯಾರನ್ನ ಬೇಕಾದರೂ ಏನ್ ಬೇಕಾದ್ರೂ ಮಾಡಿಬಿಡುತ್ತೆ. ದೇವೇಗೌಡರು ಮತ್ತೊಮ್ಮೆ ಕೆಂಪುಕೋಟೆಯ ಮೇಲೆ ರಾಷ್ಟ್ರಧ್ವಜ ಹಾರಿಸುವ ಕಾಲ ಬರ್ತಿದೆ. ಕುಮಾರಣ್ಣ ರಾಜ್ಯದಲ್ಲಿ ಅಷ್ಟೇ ಅಲ್ಲ ಕೇಂದ್ರದಲ್ಲಿಯೂ ಸ್ಥಾನಗಳಿಸುವ ಸಾಧ್ಯತೆಗಳಿವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಭವಿಷ್ಯ ನುಡಿದಿದ್ದಾರೆ.
ತಮ್ಮ ಭಾಷಣದಲ್ಲಿ ಮಾತನಾಡುತ್ತಾ, ಹೆಚ್.ಎಸ್.ಪ್ರಕಾಶ್ಗೆ ಇರುವ ವಿಶಾಲ ಹೃದಯದಂತೆ ಪುತ್ರ ಸ್ವರೂಪ್ಗೂ ಇದೆ. 1995ರ ಒಂದು ಕಾರ್ಯಕ್ರಮದಲ್ಲಿ ನಾನು ಮುಂದಿನ ಮುಖ್ಯಮಂತ್ರಿ ದೇವೇಗೌಡರು ಎಂದು ಹೇಳಿದೆ. ಅದಕ್ಕೆ ಜಿ.ಮಾದೇಗೌಡರು ಕೇಳಿದ್ದರು ಅವರು ಹೇಗೆ ಮುಖ್ಯಮಂತ್ರಿ ಆಗುತ್ತಾರೆ? ಎಂದು. ನಾನು ಅಂದು ಹೇಳಿದೆ ಇದು ಹಾಸನದ ಆಲೂಗಡ್ಡೆ ಬೀಜ. ದೇಶಕ್ಕೆಲ್ಲ ಸರಬರಾಜು ಆಗುತ್ತದೆ. ದೇವೇಗೌಡರ ಪಕ್ಷ ಅಂತಹ ಒಂದು ತಳಿ ಇದ್ದ ಹಾಗೆ ಎಂದು ವೇದಿಕೆಯಲ್ಲಿ ನೆನೆದರು.
ಹೆಚ್.ಡಿ.ಕುಮಾರಸ್ವಾಮಿ ರಾಜ್ಯ ರಾಜಕೀಯದಿಂದ ಕೇಂದ್ರಕ್ಕೆ ಹೋಗುತ್ತಾರೆ. ಹಾಸನ ಮಣ್ಣಿನ ಆಶೀರ್ವಾದ ತುಂಬಾ ಚನ್ನಾಗಿದೆ. ಬೀದರ್, ರಾಯಚೂರು, ಗುಲ್ಬರ್ಗಾದಲ್ಲಿ ಗೌಡ ಜನಾಂಗದವರು ಇಲ್ಲ, ಆದರೆ ಅಲ್ಲಿಯ ರೈತರು ಯೋಜನೆಗಳನ್ನು ನೋಡಿ ಪಕ್ಷಕ್ಕೆ ಮತ ಹಾಕುತ್ತಾರೆ. ಕುಮಾರಸ್ವಾಮಿ-ದೇವೇಗೌಡರನ್ನು ಗೆಲ್ಲಿಸುವ ಸಂಕಲ್ಪ ಜನ ಮಾಡಿದ್ದಾರೆ. ಬಸವರಾಜ ಬೊಮ್ಮಾಯಿ ಸಿದ್ದರಾಮಯ್ಯ ಕಾಲ ಮುಗಿದು ಹೋಯಿತು ಎಂದು ಹಾಸ್ಯಾಸ್ಪದವಾಗಿ ಮಾತನಾಡಿದರು.
ಹೆಚ್.ಪಿ. ಸ್ವರೂಪ್ ಬಗ್ಗೆ ಯಾರು ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ನನ್ನನ್ನು ಹಾಸನ ಕಾರ್ಯಕ್ರಮದಲ್ಲಿ ಭಾಗವಹಿಸಲು ಸೂಚಿಸಿದಂತೆ ಪಾಲ್ಗೊಂಡಿದ್ದೇವೆ. ಜೆಡಿಎಸ್ ಪಕ್ಷ ಮುಂದಿನ 25 ವರ್ಷ ಅಧಿಕಾರದಲ್ಲಿ ಇರಬೇಕು. ಆ ರೀತಿ ಬುನಾದಿ ಹಾಕುತ್ತೆವೆ. ಹಾಸನ, ಮಂಡ್ಯ, ಕೋಲಾರ, ತುಮಕೂರು ಜಿಲ್ಲೆಗಳು ಕಾಂಗ್ರೆಸ್ ಬಿಜೆಪಿ ಮುಕ್ತವಾಗಿದೆ ಎಂದರು.
ಇದನ್ನೂ ಓದಿ : 'ರಾಜ್ಯದಲ್ಲಿ ಜೆಡಿಎಸ್ ನಂಬರ್ 1 ಸ್ಥಾನದಲ್ಲಿದ್ದು, 2ನೇ ಸ್ಥಾನಕ್ಕೆ ರಾಷ್ಟ್ರೀಯ ಪಕ್ಷಗಳು ಪೈಪೋಟಿ ನಡೆಸುತ್ತಿವೆ'