ಹಾಸನ: ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಿಸಲಾಗಿದ್ದ ಕಟ್ಟಡದರ ಮೇಲ್ಛಾವಣಿ ಕುಸಿದು ಬಿದ್ದಿರುವ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ನಡೆದಿದೆ.
ಪಟ್ಟಣದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಮೇಲ್ಚಾವಣಿ ಕುಸಿದಿದ್ದು, ಬ್ಯಾಂಕ್ ಸಿಬ್ಬಂದಿ ಕರ್ತವ್ಯ ಮುಗಿಸಿ ಆಗಷ್ಟೇ ಬಾಗಿಲಿನಿಂದ ಹೊರಹೋಗಿದ್ರು. ಅಷ್ಟರೊಳಗೆ ಮೇಲ್ಛಾವಣಿ ಬಿದ್ದಿದ್ದರಿಂದ ಸಂಭವಿಸಬಹುದಾದ ದೊಡ್ಡ ದುರಂತವೊಂದು ತಪ್ಪಿದೆ ಎನ್ನಬಹುದು.
1940ರ ದಶಕದಲ್ಲಿ ನಿರ್ಮಾಣವಾಗಿದ್ದ ಈ ಕಟ್ಟಡದಲ್ಲಿ 1972ರಲ್ಲಿ ಬ್ಯಾಂಕ್ ಕಚೇರಿ ಆರಂಭಿಸಲಾಗಿತ್ತು. ಅಂದಿನಿಂದ ಬ್ಯಾಂಕ್ ಕೆಲಸ ಕಾರ್ಯಗಳು ನಡೆಯುತ್ತಾ ಬಂದಿದ್ದು, ಇಂದಿನವರೆಗೆ ಹಳೇ ಕಟ್ಟಡದ ದುರಸ್ತಿ ಕಾರ್ಯ ನಡೆದಿಲ್ಲ. ಹೀಗಾಗಿ ಶಾಸಕ ರೇವಣ್ಣನವರು ಇತ್ತ ಗಮನ ಹರಿಸಿ ಕೂಡಲೇ ನಮಗೆ ಬ್ಯಾಂಕ್ ಕಟ್ಟಡ ದುರಸ್ತಿ ಕಾರ್ಯ ಅಥವಾ ಹೊಸ ಕಟ್ಟಡವವನ್ನ ನಿರ್ಮಾಣ ಮಾಡಿಸಿಕೊಡಬೇಕು ಎಂದು ಬ್ಯಾಂಕ್ ಅಧ್ಯಕ್ಷರು ಮನವಿ ಮಾಡಿದ್ದಾರೆ.
ಇತ್ತೀಚಿಗಷ್ಟೆ ಮಳೆಯ ಆರ್ಭಟ ಮತ್ತು ನೆರೆಯಿಂದ ಪಟ್ಟಣ ಶೀತಪೀಡತ ಪ್ರದೇಶವಾಗಿದ್ದು, ಸುರಿದ ಮಳೆಗೆ ಕಟ್ಟಡದಲ್ಲಿ ನೀರು ಸೋರಿಕೆಯಾಗುತ್ತಿತ್ತು. ಇದರಿಂದ ಬ್ಯಾಂಕ್ ದಾಖಲಾತಿ ಪುಸ್ತಕಗಳು, ವಿದ್ಯುತ್ ಉಪಕರಣಗಳು ಹಾಳಾಗಿದ್ದವು. ಇದಾದ ಬಳಿಕ ಇಂದು ಕಟ್ಟಡದ ಮೇಲ್ಚಾವಣಿ ಕುಸಿದಿರುವುದರಿಂದ ಜೀವಭಯದಲ್ಲೇ ಸಿಬ್ಬಂದಿ ಕೆಲಸ ಮಾಡುವಂತಾಗಿದೆ.