ಹಾಸನ/ಸಕಲೇಶಪುರ: ಜಿಲ್ಲಾ ಬಿಎಸ್ಪಿಯಲ್ಲಿ ಕಾರ್ಯಕರ್ತರ ಆಕ್ರೋಶ ಭುಗಿಲೆದ್ದಿದ್ದು, ತಳಮಟ್ಟದಿಂದ ಪಕ್ಷ ಸಂಘಟನೆ ಮಾಡಿರುವ ನಿಷ್ಠಾವಂತರ ನಾಯಕರನ್ನು ಉಚ್ಛಾಟನೆ ಮಾಡಿದ್ದಾರೆಂದು ಬಿಎಸ್ಪಿ ಕಾರ್ಯಕರ್ತರು ರಾಜ್ಯಾಧ್ಯಕ್ಷರ ಪ್ರತಿಕೃತಿದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಸಕಲೇಶಪುರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ನೂರಾರು ಕಾರ್ಯಕರ್ತರು, ರಾಜ್ಯ ನಾಯಕರ ವಿರುದ್ಧ ಘೋಷಣೆ ಕೂಗಿ, ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ, ಮುಖಂಡರಾದ ಗಂಗಾಧರ್ ಬಹುಜನ್, ಅತ್ನಿ ಹರೀಶ್, ಲಕ್ಷಣಕೀರ್ತಿ ಅವರ ಪ್ರತಿಕೃತಿ ದಹಿಸಿ ಕಿಡಿಕಾರಿದರು.
ಬಿಎಸ್ಪಿ ನಾಯಕರಾದ ಸ್ಟೀವನ್ ಪ್ರಕಾಶ್, ಮೋಹನ್ ಕಾಡ್ಲೂರು, ವಕೀಲ ವೇಣು,ಬೇಲೂರು ಯೋಗೇಶ್, ಹಾಸನದ ಸೋಮಶೇಖರ್ ಅವರನ್ನು ಉಚ್ಛಾಟನೆ ಮಾಡಿರುವುದು ಜಿಲ್ಲೆಯ ಬಿಎಸ್ಪಿಗೆ ತುಂಬಲಾರದ ನಷ್ಟವಾಗಿದ್ದು, ತಳಮಟ್ಟದಿಂದ ಸಂಘಟನೆ ಮಾಡಿದವರಿಗೆ ಪಕ್ಷ ಮೋಸ ಎಸಗಿದೆ. ಕಳೆದ 24 ವರ್ಷಗಳಿಂದ ಚಳವಳಿಗೆ ಬೆನ್ನೆಲುಬಾಗಿ ನಿಂತು, ಕ್ಷೇತ್ರದಲ್ಲಿ ಧನಾತ್ಮಕ ಕಾರ್ಯಕರ್ತರು ಮತ್ತು ನಾಯಕರನ್ನು ಹುಟ್ಟು ಹಾಕಿದ ಚಲನಶೀಲ ಜಿಲ್ಲಾ ನಾಯಕರನ್ನು ಉಚ್ಛಾಟಿಸಿ ಸರ್ವಾಧಿಕಾರಿಗಳಂತೆ ವರ್ತಿಸುವವರಿಗೆ ಅಧಿಕಾರ ನೀಡಿರುವುದು ಖಂಡನೀಯ ಎಂದು ದೂರಿದರು.
ಕಾರ್ಯಕರ್ತರ ಅಭಿಪ್ರಾಯದಂತೆ ಜಿಲ್ಲಾ ಸಮಿತಿಯನ್ನು ರಚನೆ ಮಾಡಿಲ್ಲ. ಉಚ್ಛಾಟಿತ ನಮ್ಮ ನಾಯಕರು ಪಕ್ಷದ ಹಿತದೃಷ್ಟಿಯಿಂದ ಪ್ರಶ್ನೆ ಮಾಡಿದರೆ, ಇದನ್ನೇ ಪಕ್ಷ ವಿರೋಧಿ ಚಟುವಟಿಕೆ ಎಂದು ಭಾವಿಸಿದರೆ ಮುಂದಿನ ದಿನಗಳಲ್ಲಿ ಇವರು ಯಾವ ಕಾರ್ಯಕರ್ತರ ವಿಶ್ವಾಸ ಗಳಿಸಿ ಪಕ್ಷ ಕಟ್ಟುತ್ತಾರೆ ಎಂಬುವುದು ಪ್ರಶ್ನೆಯಾಗಿದೆ ಎಂದರು.
ಉದ್ದೇಶಪೂರ್ವಕವಾಗಿ ನಮ್ಮ ನಾಯಕರನ್ನು ಉಚ್ಛಾಟನೆ ಮಾಡಿರುವುದು ಖಂಡನೀಯ. ಕೂಡಲೇ ಉಚ್ಛಾಟನೆ ವಾಪಸ್ ಪಡೆಯುವಂತೆ ಆಗ್ರಹಿಸಿದರು.