ಹಾಸನ: ಎರಡೂವರೆ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಸರ್ಕಾರ ಅಂಕಿತ ಹಾಕಿದೆ.
ಅಧ್ಯಕ್ಷ ಸ್ಥಾನ ಮೀಸಲಾತಿ ಎಂದು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದ ಜೆಡಿಎಸ್ ಮತ್ತು ಬಿಜೆಪಿ ನಡುವೆ ಅಧ್ಯಕ್ಷಗಾದಿ ಹಿಡಿಯಲು ಪ್ರತಿಷ್ಠೆಯ ಕಣ ಏರ್ಪಟ್ಟಿತ್ತು.
ಚುನಾವಣೆ ನಡೆದು ಎರಡೂವರೆ ವರ್ಷದ ಬಳಿಕ ಕೊನೆಗೂ ಮೊಟ್ಟ ಮೊದಲ ಬಾರಿಗೆ ಹಾಸನ ನಗರಸಭೆಯನ್ನು ಬಿಜೆಪಿ ತನ್ನ ತೆಕ್ಕೆಗೆ ಪಡೆಯಲು ಮುಂದಾಗಿದೆ. ನಗರದಲ್ಲಿ 35 ವಾರ್ಡ್ ಗಳಿದ್ದು, ಇದರಲ್ಲಿ 34 ನೇ ವಾರ್ಡಿನ ನಗರಸಭಾ ಸದಸ್ಯ ಮೋಹನ್ ಪರಿಶಿಷ್ಟ ವರ್ಗದಲ್ಲಿ ಇರುವ ಏಕೈಕ ಬಿಜೆಪಿ ಸದಸ್ಯ. ಹೀಗಾಗಿ ನಗರಸಭೆಯ ಪಟ್ಟ ಇವರಿಗೆ ಎನ್ನಲಾಗಿದೆ.
ಇನ್ನು ಉಪಾಧ್ಯಕ್ಷ ಸ್ಥಾನಕ್ಕೆ ಬಿಸಿಎಂ ಮಹಿಳೆ ಬಂದಿರುವುದರಿಂದ ಬಿಜೆಪಿಯ ಮಂಗಳಾ ಪ್ರದೀಪ್ ಆಯ್ಕೆಯಾಗುವ ಸಂಭವವಿದ್ದು, ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳು ಬಿಜೆಪಿ ಪಾಲಾಗಲಿವೆ. ಹೀಗಾಗಿ ಹಾಸನದಲ್ಲಿ ಮೊದಲ ಬಾರಿಗೆ ಬಿಜೆಪಿ ನಗರಸಭೆಯನ್ನು ತನ್ನ ತೆಕ್ಕೆಗೆ ಪಡೆಯುವ ಮೂಲಕ ಮತ್ತೊಮ್ಮೆ ಜೆಡಿಎಸ್ ಪಾಳಯಕ್ಕೆ ಶಾಕ್ ನೀಡಿದೆ.
ಹಾಸನ ನಗರಸಭೆಯ ಪಕ್ಷಗಳ ಬಲಾ ಬಲ ನೋಡುವುದಾದ್ರೆ :
ಜೆಡಿಎಸ್ ಪಕ್ಷದಲ್ಲಿ 16 ಸದಸ್ಯರಿದ್ದು, ಬಿಜೆಪಿ ಪಕ್ಷದಲ್ಲಿ 13 ಸದಸ್ಯರಿದ್ದಾರೆ. ಇನ್ನು ಕಾಂಗ್ರೆಸ್ ಪಕ್ಷದಿಂದ 2 ಮತ್ತು ಪಕ್ಷೇತರವಾಗಿ 4 ಮಂದಿ ಸದಸ್ಯರಿದ್ದಾರೆ.
ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಹಾಸನ ಶಾಸಕ ಪ್ರೀತಂ ಜೆ.ಗೌಡ ಶತಾಯಗತಾಯ ಈ ಬಾರಿಯ ನಗರಸಭೆಯ ಅಧ್ಯಕ್ಷಗಾದಿಯನ್ನ ಯಾವುದೇ ಮೀಸಲಾತಿ ಬಂದ ಬಿಜೆಪಿಯೇ ಚುಕ್ಕಾಣಿ ಹಿಡಿಯಲಿದೆ ಎಂದು ಗರ್ವದಿಂದ ಹೇಳಿದ್ದ ಬೆನ್ನಲ್ಲಿಯೇ ಮೀಸಲಾತಿ ಪಟ್ಟಿ ಪ್ರಕಟವಾಗಿರುವುದು ಅಚ್ಚರಿ ತಂದಿದೆ.
ಇನ್ನು ಹಾಸನ ಜಿಲ್ಲೆಯ ಅರಸೀಕೆರೆಯ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಪಟ್ಟಿ ಪ್ರಕಟವಾಗಿದ್ದು, ಇಲ್ಲಿಯೂ ಕೂಡಾ ಅಧ್ಯಕ್ಷ ಸ್ಥಾನ ಬಿಜೆಪಿ ಪಾಲಾಗಲಿದೆ. ಕಾರಣ 31 ವಾರ್ಡ್ ಗಳನ್ನು ಹೊಂದಿರುವ ಅರಸೀಕೆರೆಯ ನಗರಸಭೆಗೆ ಪರಿಶಿಷ್ಠ ಪಂಗಡ ಬಂದಿದೆ.
4ನೇ ವಾರ್ಡಿನ ಗಿರೀಶ್ ಬಿಜೆಪಿಯ ಸದಸ್ಯರಾಗಿದ್ದು, ನಗರಸಭೆಯ ಅಧ್ಯಕ್ಷ ಸ್ಥಾನ ಬಿಜೆಪಿ ಪಾಲಾಗಲಿದೆ. ಇನ್ನು ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷದಿಂದ ಹಲವರು ಇರುವುದರಿಂದ ಮತ್ತೆ ಗೊಂದಲ ಉಂಟಾಗಲಿದೆ.
ಅರಸೀಕೆರೆಯ ನಗರಸಭೆಯ ಪಕ್ಷಗಳ ಬಲಾ ಬಲ :
ಜೆಡಿಎಸ್ ಪಕ್ಷದಲ್ಲಿ 22 ಮಂದಿ ಸದಸ್ಯರಿದ್ದು, ಬಿಜೆಪಿ ಪಕ್ಷದಲ್ಲಿ 5 ಮಂದಿ ಸದಸ್ಯರಿದ್ದಾರೆ. ಇನ್ನು ಕಾಂಗ್ರೆಸ್ ಪಕ್ಷದಿಂದ 1 ಮತ್ತು ಪಕ್ಷೇತರವಾಗಿ 3 ಮಂದಿ ಸದಸ್ಯರಿದ್ದಾರೆ. ಆದರೆ ಪಕ್ಷೇತರವಾಗಿ ಗೆದ್ದಿರೋ ಅಭ್ಯರ್ಥಿಗಳು ಜೆಡಿಎಸ್ ಪಕ್ಷಕ್ಕೆ ಬೆಂಬಲ ಸೂಚಿಸಿರುವುದರಿಂದ ಅರಸೀಕೆರೆ ನಗರಸಭೆಯಲ್ಲಿ ಜೆಡಿಎಸ್ ಪ್ರಾಬಲ್ಯ ಇದ್ದರೂ ಕೇವಲ 5 ಸ್ಥಾನ ಗೆದ್ದಿರುವ ಬಿಜೆಪಿ ಪಕ್ಷದ ಪರವಾಗಿ ಮೀಸಲಾತಿ ಪಟ್ಟಿ ಬಂದಿರುವುದರಿಂದ ಜೆಡಿಎಸ್ ಪಕ್ಷದ ಸದಸ್ಯರು ಮತ್ತೆ ನ್ಯಾಯಾಲಯದ ಮೊರೆ ಹೋಗಿದ್ದಾರೆ ಎನ್ನಲಾಗಿದೆ.
ಜೆಡಿಎಸ್ ಭದ್ರಕೋಟೆಯೆಂದೇ ಬಿಂಬಿತವಾಗಿದ್ದ ಹಾಸನ ಈಗ ತನ್ನ ಕೋಟೆಯ ಒಂದೊಂದೆ ಬಾಹುವನ್ನು ಕಳೆದುಕೊಳ್ಳುತ್ತಾ ಬರುತ್ತಿದೆ ಎಂದ್ರೆ ತಪ್ಪಾಗಲ್ಲ. ಆದ್ರೆ ಪಕ್ಷಗಳ ಬಲಾ ಬಲಗಳ ಆಧಾರದ ಮೇಲೆ ನೋಡುವುದಾದ್ರೆ ಮತ್ತೆ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳು ನ್ಯಾಯಾಲಯದ ಮೊರೆ ಹೋಗುತ್ತಾರೆ ಎನ್ನಲಾಗಿದ್ದು, ಈಗಾಗಲೇ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಬೆಂಗಳೂರಿಗೆ ಪಯಣ ಬೆಳೆಸಿದ್ದಾರೆ.