ಹಾಸನ: ರೀ ಶಿವಲಿಂಗೇಗೌಡ್ರೇ, ಅರಸೀಕೆರೆಯಲ್ಲಿ ನಿಮ್ಮನ್ನ ಸೋಲಿಸುವುದಕ್ಕೆ ಬಿಜೆಪಿಯಲ್ಲಿ ಗಂಡಸರೇ ಬೇಕಿಲ್ಲ. ನಮ್ಮ ಹೈಕಮಾಂಡ್ ನನಗೊಂದು ಚಾನ್ಸ್ ಕೊಟ್ರೆ ಸಾಕು, ನಾನೇ ನಿಮ್ಮನ್ನ ಸೋಲಿಸುತ್ತೇವೆ ಅಂತ ಜಿಲ್ಲಾ ಮಹಿಳಾ ಯುವಮೋರ್ಚಾ ಅಧ್ಯಕ್ಷೆ ಶಿಲ್ಪಾ ಸತೀಶ್ ಶಿವಲಿಂಗೇಗೌಡರಿಗೆ ಟಾಂಗ್ ಕೊಟ್ಟಿದ್ದಾರೆ.
ಚುನಾವಣೆ ಸಂದರ್ಭದಿಂದಲೂ ಅರಸೀಕೆರೆಯ ಶಾಸಕ ಕೆ.ಎಂ. ಶಿವಲಿಂಗೇಗೌಡ ಮೋದಿ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿ ಪ್ರತಿ ಬಾರಿಯೂ ನಿಂದನೆ ಮಾಡುತ್ತಲೇ ಬರುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿ ವಿರುದ್ಧ ಕೆಂಡಾಮಂಡಲವಾಗಿ ಅರಸಿಕೆರೆಯಲ್ಲಿ ನನ್ನ ವಿರುದ್ಧ ನಿಲ್ಲೋಕೆ ಗಂಡಸರೇ ಇಲ್ಲ. ಹಾಗಾಗಿ ಬೇರೆ ಜಿಲ್ಲೆಗಳಿಂದ ಬರ್ರಿ ಬರ್ರಿ ಅಂತ ಕರ್ಕೊಂಡ್ ಬರ್ತಾರೆ ಅಂತ ಪತ್ರಿಕಾಗೋಷ್ಠಿಯಲ್ಲಿ ಕಟುವಾಗಿ ಟೀಕಿಸಿ ವ್ಯಂಗ್ಯವಾಡಿದ್ರು.
ಈ ಹೇಳಿಕೆಗೆ ಭಾರೀ ಖಂಡನೆ ವ್ಯಕ್ತವಾಗಿದೆ. ಇನ್ನು ಈ ಬಗ್ಗೆ ಬಿಜೆಪಿಯ ಮಹಿಳಾ ಮೋರ್ಚಾ ಸದಸ್ಯರು ರೀ ಶಿವಲಿಂಗೇಗೌಡ್ರೇ, ನಿಮ್ಮನ್ನ ಸೋಲಿಸುವುದಕ್ಕೆ ಬಿಜೆಪಿಯಲ್ಲಿ ಗಂಡಸ್ರು ಬೇಕಿಲ್ಲ. ನಾವೇ ಸಾಕು ಎಂದು ಹೇಳುವ ಮೂಲಕ ಶಾಸಕರಿಗೆ ಸುದ್ದಿಗೋಷ್ಠಿಯಲ್ಲೇ ಮಂಗಳಾರತಿ ಎತ್ತಿದ್ದಾರೆ.
ಅರಸೀಕೆರೆ ನಗರಸಭೆಯಲ್ಲಿ ಈಗಾಗಲೇ 4 ಮಂದಿ ಜೆಜೆಪಿ ಮಹಿಳಾ ಘಟಕದ ಸದಸ್ಯರಿದ್ದಾರೆ. ಅದ್ರಲ್ಲಿ ತಾವು ವಾಸವಾಗಿರೋ ವಾರ್ಡನಲ್ಲಿಯೇ ಬಿಜೆಪಿ ಮಹಿಳಾ ಅಭ್ಯರ್ಥಿ ಗೆದ್ದಿಲ್ವಾ. ಮೊನ್ನೆ ಮೊನ್ನೆ ನಡೆದ ಲೋಕಸಭಾ ಚುನಾವಣೆಯಲ್ಲಿ 75 ಸಾವಿರ ಮತಗಳನ್ನು ಪಡೆದು ದಾಖಲೆ ಮಾಡಿಲ್ವಾ..? ಮುಂದಿನ ದಿನಗಳಲ್ಲಿ ಬಿಜೆಪಿ ಮತ್ತಷ್ಟು ಬಲಗೊಳ್ಳಲಿದೆ. ಆದರೆ, ತಾವು ದೇಶದ ಪ್ರಧಾನಿ ಮೋದಿಯವರನ್ನು ಟೀಕಿಸಿ, ತಮ್ಮ ಘನತೆ ಏನೆಂಬುದನ್ನು ತೋರಿಸಿಕೊಂಡಿದ್ದೀರಿ ಎಂದರು.
ಮುಂದಿನ ಚುನಾವಣೆಯಲ್ಲಿ ನಾನು ಕೂಡ ಶಾಸಕ ಸ್ಥಾನದ ಪ್ರಬಲ ಆಕಾಂಕ್ಷಿ. ನಮ್ಮ ಪಕ್ಷ ಅವಕಾಶ ಕೊಟ್ಟರೆ ಮುಂದಿನ ಚುನಾವಣೆಯಲ್ಲಿ ನಾನೇ ಖುದ್ದು ಸ್ಪರ್ಧೆಮಾಡುತ್ತೇನೆ. ಶಾಸಕರ ಹೇಳಿಕೆಯನ್ನು ಸವಾಲಾಗಿ ಸ್ವೀಕರಿಸಿದ್ದು, ಅವರ ಆಟಾಟೋಪಗಳಿಗೆ ಕಡಿವಾಣ ಹಾಕಿ, ಅರಸೀಕೆರೆ ಅಭಿವೃದ್ಧಿ ಕಡೆ ಗಮನಹರಿಸುತ್ತೇವೆ ಎಂದರು.