ಹಾಸನ: ಪೊಲೀಸ್ ಇಲಾಖೆ ಮತ್ತು ಸಿಬ್ಬಂದಿ ಎಷ್ಟೇ ಜಾಗೃತಿ ಮೂಡಿಸಿ, ಕಠಿಣ ಕ್ರಮಗಳನ್ನು ಕೈಗೊಂಡಿದ್ದರೂ ಸಹ ಕೆಲವರು ಬುದ್ಧಿ ಕಲಿಯುತ್ತಿಲ್ಲ. ಅಪ್ರಾಪ್ತರ ಕೈಯಲ್ಲಿ ವಾಹನಗಳನ್ನು ಕೊಡಬಾರದು ಮತ್ತು ಅವರು ವಾಹನಗಳನ್ನು ಓಡಿಸುವಂತಿಲ್ಲ ಎಂಬ ನಿಯಮ ಇದ್ದರೂ ಸಹ ತಪ್ಪುಗಳು ಮರುಕಳಿಸುತ್ತಲೇ ಇವೆ. ಇಂತಹದ್ದೇ ಒಂದು ಘಟನೆ ನಗರದಲ್ಲಿ ನಡೆದಿದೆ. ಬುಧವಾರ ರಾತ್ರಿ 9 ಗಂಟೆಗೆ ಅಪ್ರಾಪ್ತ ವಯಸ್ಸಿನ ಬಾಲಕರು ಬೈಕ್ ವ್ಹೀಲಿಂಗ್ ಮಾಡಿದ ಪರಿಣಾಮ ರಸ್ತೆಯಲ್ಲಿ ಹೊರಟಿದ್ದ ಇಬ್ಬರು ಕಾಲೇಜು ವಿದ್ಯಾರ್ಥಿನಿಯರಿಗೆ ಡಿಕ್ಕಿ ಹೊಡೆದಿದ್ದಾರೆ. ರಭಸವಾಗಿ ಡಿಕ್ಕಿ ಹೊಡದಿರುವುದರಿಂದ ಇಬ್ಬರು ವಿದ್ಯಾರ್ಥಿನಿಯರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಭೂಮಿಕ ನಗರದ ಸಹ್ಯಾದ್ರಿ ವೃತ್ತದಲ್ಲಿನ ಪುಡ್ ಕೋರ್ಟ್ನಲ್ಲಿ ಊಟ ಮಾಡಿಕೊಂಡು ವಿದ್ಯಾರ್ಥಿನಿಯರು ತಮ್ಮ ರೂಮಿಗೆ ವಾಪಸ್ ಹೋಗುತ್ತಿದ್ದರು. ಎದುರಿನಿಂದ ಬೈಕ್ ವ್ಹೀಲಿಂಗ್ ಮಾಡಿಕೊಂಡು ಬಂದ ಇಬ್ಬರು ಅಪ್ರಾಪ್ತರು, ವಿದ್ಯಾರ್ಥಿನಿಯರಾದ ಭೂಮಿಕ ಹಾಗೂ ಸಿಂಚನಾಗೆ ಗುದ್ದಿದ್ದು, ಈ ಇಬ್ಬರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾರೆ. ತಕ್ಷಣ ಸ್ಥಳೀಯರು, ಅವರನ್ನು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಲಾಯಿತು. ಭೂಮಿಕಾ ತಲೆಗೆ ಬಲವಾದ ಪೆಟ್ಟು ಬಿದ್ದಿರುವ ಹಿನ್ನೆಲೆಯಲ್ಲಿ ಆಕೆಯನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲು ಮಾಡಲು ವೈದ್ಯರು ಸೂಚಿಸಿದ್ದಾರೆ. ಸಿಂಚನ ಕಾಲಿಗೆ ಪೆಟ್ಟು ಬಿದ್ದಿದ್ದು, ಆಕೆಗೆ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ.
ಇಬ್ಬರು ಆರೋಪಿಗಳ ವಶಕ್ಕೆ: ಅಪಘಾತಕ್ಕೆ ಕಾರಣರಾದ ಶಾಕೀರ್ ಮತ್ತು ಅಪ್ರಾಪ್ತ ಬಾಲಕನನ್ನು ಅರೆಬೆತ್ತಲೆಗೊಳಿಸಿದ ಸ್ಥಳೀಯರು ಧರ್ಮದೇಟು ನೀಡಿದ್ದಾರೆ. ಅಲ್ಲದೇ ಅವರ ದ್ವಿಚಕ್ರ ವಾಹನಕ್ಕೆ ಮತ್ತು ಅವರ ಬಟ್ಟೆಗೆ ಬೆಂಕಿ ಹಚ್ಚಲು ಮುಂದಾಗುತ್ತಿದ್ದಂತೆ, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದರು. ಸದ್ಯ ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೋಷಕರಿಗೂ ಎಚ್ಚರಿಕೆ ಕೊಟ್ಟಿದ್ದ ಎಸ್ಪಿ: ಮೊನ್ನೆ ಪೊಲೀಸ್ ವರಿಷ್ಠಾಧಿಕಾರಿಯವರು ವ್ಹೀಲಿಂಗ್ ಮಾಡುತ್ತಿದ್ದ ಮೂವರು ಅಪ್ರಾಪ್ತ ಬಾಲಕರನ್ನು ವಶಕ್ಕೆ ಪಡೆದು ಬುದ್ಧಿವಾದ ಹೇಳಿ, ಅವರ ಪೋಷಕರಿಗೂ ಎಚ್ಚರಿಕೆ ನೀಡಿ ಕಳುಹಿಸಿದ್ದರು. ಇದಾದ ನಂತರ ವ್ಹೀಲಿಂಗ್ನಿಂದ ರಸ್ತೆ ಅಪಘಾತಯೊಂದು ಜರುಗಿದೆ. ನಗರದಲ್ಲಿ ವ್ಹೀಲಿಂಗ್ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ತಮ್ಮ ಬೈಕ್ಗೆ ಅಲ್ಟ್ರೇಷನ್ ಮಾಡಿಸಿಕೊಂಡು ಕರ್ಕಶ ಧ್ವನಿಯೊಂದಿಗೆ ನಗರದಲ್ಲಿ ಸಂಚಾರ ನಿಯಮ ಉಲ್ಲಂಘಿಸಿ ಬೈಕ್ ಓಡಿಸುವ ಪುಂಡರಿಗೆ ಪೊಲೀಸರು ತಕ್ಕ ಶಾಸ್ತಿ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದರು.
ಇದನ್ನೂ ಓದಿ: ರಸ್ತೆಯಲ್ಲಿ ಬೈಕ್ ವ್ಹೀಲಿಂಗ್ ಮಾಡುತ್ತಾ ಶಾಲಾ ವಿದ್ಯಾರ್ಥಿನಿಗೆ ಗುದ್ದಿದ ಸವಾರ... ಸಿಸಿಟಿವಿ ವಿಡಿಯೋ