ಶ್ರವಣಬೆಳಗೊಳ (ಹಾಸನ): ಮನೆಗಳ ಬಾಗಿಲನ್ನು ಹೊರಗಿನಿಂದ ಲಾಕ್ ಮಾಡಿ ಬೈಕ್ ಕಳ್ಳತನ ಮಾಡಿರುವ ಘಟನೆ ಹಾಸನ ಜಿಲ್ಲೆಯ ಶ್ರವಣಬೆಳಗೊಳ ಪಟ್ಟಣದಲ್ಲಿ ಶುಕ್ರವಾರ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ನಡೆದಿದೆ.
ಪಟ್ಟಣದ ಹಳೆ ಪೋಸ್ಟ್ ಆಫೀಸ್ ರಸ್ತೆಯ ಪ್ರಜ್ವಲ್ ಎಂಬುವವರ ಮನೆಯ ಮುಂದೆ ನಿಲ್ಲಿಸಿದ್ದ ಬೈಕ್ನ್ನು ದುಷ್ಕರ್ಮಿಗಳು ಎಗರಿಸಿದ್ದಾರೆ. ಬಳಿಕ ಪಕ್ಕದ ಜೈನಬೀದಿ ಹಾಗೂ ಭಜಂತ್ರಿ ಬೀದಿಯಲ್ಲೂ ಖದೀಮರು ಬೈಕ್ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ್ದಾರೆ.
ಲಾಕ್ ಆದ ಬೈಕ್ನ್ನು ಓರ್ವ ತನ್ನ ಕಾಲಿನಿಂದ ಲಾಕ್ ಓಪನ್ ಮಾಡಿ ನಂತರ ಬೈಕ್ ಸ್ಟಾರ್ಟ್ ಮಾಡುವ ವೇಳೆ ಸೆನ್ಸಾರ್ ಅಲಾರಾಂ ಶಬ್ದ ಕೇಳಿಸಿದೆ. ಆದರೆ ಮನೆ ಬಾಗಿಲು ಲಾಕ್ ಆಗಿದ್ದರಿಂದ ಮಾಲೀಕ ಹೊರಬರಲಾಗದೆ ಇದ್ದಿದ್ದರಿಂದ ಖದೀಮರು ಬೈಕ್ ಎಗರಿಸಿದ್ದಾರೆ ಎಂದು ತಿಳಿದುಬಂದಿದೆ.
ಬಳಿಕ ಬೇರೆ ಬೈಕ್ಗಳನ್ನ ಕಳ್ಳತನ ಮಾಡಲು ಹೋಗಿ ವಿಫಲವಾಗಿದ್ದಾರೆ. ಇತ್ತೀಚೆಗೆ ಬೈಕ್ಗಳಲ್ಲಿ ಸೆನ್ಸಾರ್ ಅಲಾರಾಂ ಇದ್ದು, ಸ್ಟಾರ್ಟ್ ಮಾಡುವಾಗ ಶಬ್ದ ಬರುತ್ತದೆ. ಹೀಗಾಗಿ 3 ಬೈಕ್ಗಳ ಲಾಕ್ ಮುರಿದು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಕಳ್ಳರ ದುಷ್ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕಳ್ಳರ ಗ್ಯಾಂಗ್ ಗುಂಪಾಗಿ ಬಂದು ಈ ಕೃತ್ಯ ಎಸಗಿರುವ ಅನುಮಾನ ವ್ಯಕ್ತವಾಗುತ್ತಿದೆ. ಎರಡು ತಿಂಗಳ ಹಿಂದೆಯಷ್ಟೇ ಇದೇ ಬಡಾವಣೆಯಲ್ಲಿ ಹಾಡಹಗಲೇ ಮಹಿಳೆಯ ಸರ ಕಿತ್ತು ಪರಾರಿಯಾಗಿದ್ದರು. ಇದರಿಂದ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ: ಬೆಳಗಾವಿ: ರಸ್ತೆ ಪಕ್ಕ ನಿಲ್ಲಿಸಿದ್ದ ಬೈಕ್ ಕಳ್ಳತನ, ಕೃತ್ಯ ಸಿಸಿಟಿವಿಯಲ್ಲಿ ಸೆರೆ