ಹಾಸನ :ಜಿಲ್ಲೆಯ ಅರಸೀಕೆರೆ ತಾಲೂಕಿನ ಕಣಕಟ್ಟೆ ಹೋಬಳಿಯ ವಿಜಯ್ ಕುಮಾರ್ ಎಂಬುವರು ರಾಜಾರೋಷವಾಗಿ ಜನರಿಂದ ಲಂಚ ಪಡೆಯುತ್ತಿರುವ ದೃಶ್ಯ ಸಾರ್ವಜನಿಕರೊಬ್ಬರ ಮೊಬೈಲಲ್ಲಿ ಚಿತ್ರೀಕರಣವಾಗಿದ್ದು, ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಜಿಲ್ಲೆಯಲ್ಲಿ ಲಂಚಗುಳಿತನ ಹೆಚ್ಚಾಗುತ್ತಿದ್ದು, ಇತ್ತೀಚೆಗೆ ಅರಸೀಕೆರೆಯಲ್ಲಿ ಉಪನೋಂದಣಾಧಿಕಾರಿ ಕಚೇರಿಯಲ್ಲಿಯೂ ಲಂಚದ ಹಾವಳಿಯಿಂದ ಸಾರ್ವಜನಿಕರೇ ಕಚೇರಿಯಲ್ಲಿ ಕುಳಿತು ಪ್ರತಿಭಟನೆ ಮಾಡಿದ್ರು. ಈ ಬೆನ್ನಲ್ಲಿಯೇ ಇಂದು ಕಣಕಟ್ಟೆ ಹೋಬಳಿಯ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ವಿಜಯ್ ಕುಮಾರ್ , ಮಹಿಳೆಯೊಬ್ಬರ ಬಳಿ ಕಚೇರಿಯಲ್ಲಿಯೇ ರಾಜಾರೋಷವಾಗಿ ಹಣದ ಬೇಡಿಕೆ ಇಟ್ಟಿರುವ ವಿಡಿಯೋ ವೈರಲ್ ಆಗಿದೆ.
ಅರಸೀಕೆರೆ ತಾಲೂಕಿನ ರೈತರು ಮಳೆ -ಬೆಳೆ ಇಲ್ಲದೆ ಕಂಗಾಲಾಗಿದ್ದಾರೆ. ಜೊತೆಗೆ ಕೋವಿಡ್- 19 ನಡುವೆ ಸಂಕಷ್ಟದಲ್ಲಿರುವ ರೈತರಿಗೆ ಕಿಸಾನ್ ಕಾರ್ಡ್ ಸಾಲ ಯೋಜನೆಯ ಚೆಕ್ ವಿತರಣೆಗೆ ಇಂತಿಷ್ಟು ಲಂಚ ಕೊಡಬೇಕೆಂದು ವಿಜಯ್ ಕುಮಾರ್ ಫಿಕ್ಸ್ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದ್ದು, ಹಣ ಕೊಡದಿದ್ದರೆ ಕೆಲಸವೇ ಆಗುವುದಿಲ್ಲ ಎನ್ನುತ್ತಾರೆ ಸಾರ್ವಜನಿಕರು.
ಈ ಹಿಂದೆ ಹಾಸನದಲ್ಲಿ ಮಾಜಿ ಸಚಿವ ಹೆಚ್. ಡಿ. ರೇವಣ್ಣ ಉಪನೋಂದಣಾಧಿಕಾರಿ ಕಚೇರಿಗೆ ದಿಢೀರ್ ಭೇಟಿ ಕೊಟ್ಟು ಲಂಚದ ಆರೋಪ ಮಾಡಿ ಕೆಲವು ಅಧಿಕಾರಿಗಳಿಗೆ ಚಳಿ ಬಿಡಿಸಿದ್ದರು. ಆದ್ರೂ ಜಿಲ್ಲೆಯಲ್ಲಿ ಲಂಚಗುಳಿತನ ಮುಂದುವರಿಯುತ್ತಲೇ ಇದ್ದು, ಕೃಷಿಪತ್ತಿನ ಸಹಕಾರ ಬ್ಯಾಂಕಿನಲ್ಲಿ ನಡೆದಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಜಯ್ ಕುಮಾರ್ನನ್ನು ಅಮಾನತುಪಡಿಸಿ ಎಂಬುದು ಸ್ಥಳೀಯರ ಆಗ್ರಹ.