ಹಾಸನ: ಆಸ್ತಿ ಗಲಾಟೆಯ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವನ ಮೇಲೆ ಗುಂಡು ಹಾರಿಸಿದ ಘಟನೆ ಸಕಲೇಶಪುರ ತಾಲೂಕಿನ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕೃತಿಕ್ ಗುಂಡಿನ ದಾಳಿಗೊಳಗಾದ ವ್ಯಕ್ತಿ. ಇವರ ಬಲತೋಳಿಗೆ ಗುಂಡು ಹೊಕ್ಕಿದೆ. ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಾಸನದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆಸ್ತಿ ವಿಚಾರದಲ್ಲಿ ಕೃತಿಕ್ ಮತ್ತು ರವಿ ಎಂಬುವರ ನಡುವೆ ವೈಮನಸ್ಸು ಉಂಟಾಗಿ ಹಲವು ಬಾರಿ ರಾಜಿ ಸಂಧಾನ ನಡೆದಿತ್ತು. ಆದರೆ ರಾಜಿ ಸೂತ್ರಕ್ಕೆ ರವಿ ಒಪ್ಪಿರಲಿಲ್ಲ. ಇಂದು ಕೃತಿಕ್ ತನ್ನ ಕಾರಿನಲ್ಲಿ ಬರುವಾಗ ಮತ್ತೊಂದು ಕಾರಿನಲ್ಲಿ ಬಂದ ರವಿ ಹಾಗೂ ಆತನ ಸಹಚರರಾದ ವೇದಮೂರ್ತಿ ಹಾಗೂ ಸುರೇಶ್ ಬಂದೂಕಿನಿಂದ ಏಕಾಏಕಿ ದಾಳಿ ನಡೆಸಿದ್ದಾರೆ.
ಘಟನಾ ಸ್ಥಳಕ್ಕೆ ಯಸಳೂರು ಪೊಲೀಸರು ಭೇಟಿ ನೀಡಿ, ಹಲ್ಲೆಗೊಳಗಾದ ಕೃತಿಕ್ನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪರಾರಿಯಾಗಿರುವ ರವಿ ಮತ್ತು ಆತನ ಸಹಚರರಿಗಾಗಿ ಪೊಲೀಸರು ವಿಶೇಷ ತಂಡ ರಚನೆ ಮಾಡಿದ್ದಾರೆ.