ಹಾಸನ: ವಿದ್ಯುತ್ ಬಿಲ್ ಕಟ್ಟಪ್ಪ ಅಂದ್ರೆ, ಬೆಸ್ಕಾಂ ಅಧಿಕಾರಿಯ ಮೇಲೆಯೇ ಯುವಕನೊಬ್ಬ ಹಲ್ಲೆಗೆ ಮುಂದಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಯೋಗೇಶ್ ಎಂಬಾತ ಬೆಸ್ಕಾಂ ಸಿಬ್ಬಂದಿಯಾಗಿರೋ ಪ್ರವೀಣ್‌ಕುಮಾರ್ ಮೇಲೆ ಹಲ್ಲೆ ಮಾಡಿದ ಆರೋಪಿಯಾಗಿದ್ದು, ಹಾಸನ ಜಿಲ್ಲೆಯ ಹೊಳೊನರಸೀಪುರ ತಾಲೂಕಿನ ಈಡಿಗನ ಹೊಸೂರು ಗ್ರಾಮದಲ್ಲಿ ಇಂತಹದೊಂದು ಘಟನೆ ಜರುಗಿದೆ.
ಇನ್ನು, ಕಳೆದ ಒಂದೂವರೆ ವರ್ಷಗಳಿಂದ ಯೋಗೇಶ್ ತನ್ನ ಮನೆಯ ವಿದ್ಯುತ್ ಬಿಲ್ ಪಾವತಿಸದೆ ₹8000 ಬಾಕಿ ಉಳಿಸಿಕೊಂಡಿದ್ದ. ಹಲವಾರು ಬಾರಿ ಬಿಲ್ ಕಟ್ಟಬೇಕೆಂದು ಸೂಚನೆ ನೀಡಿದ್ದರೂ ಕೂಡಾ ಆತ ಹಣ ಪಾವತಿ ಮಾಡಿರಲಿಲ್ಲ. ಹೀಗಾಗಿ ಮನೆಯ ವಿದ್ಯುತ್ ಸಂಪರ್ಕವನ್ನು ನಿನ್ನೆ ಕಡಿತ ಮಾಡಲಾಗಿತ್ತು.
ವಿದ್ಯುತ್ ಸಂಪರ್ಕ ಕಡಿತ ಮಾಡಿದ್ದಕ್ಕೆ, ಪ್ರವೀಣ್‌ಗೆ ಅವಾಚ್ಯ ಶಬ್ದಗಳನ್ನು ಬಳಸಿ ಜಗಳ ಮಾಡಿದ್ದು, ಸಿಬ್ಬಂದಿಯ ಮೊಬೈಲ್ ಮತ್ತು ಆತ ತಂದಿದ್ದ ದ್ವಿಚಕ್ರ ವಾಹನದ ಕೀ ಕಿತ್ತುಕೊಂಡು ಹಲ್ಲೆ ಮಾಡಲು ಮುಂದಾದ ವೇಳೆ ಗ್ರಾಮಸ್ಥರು ಆತನನ್ನು ಸಮಾಧಾನಪಡಿಸಿದ್ದಾರೆ. ಅದೇ ಈ ಸಂಬಂಧ ಪ್ರವೀಣ್ ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದು ದೂರಿನನ್ವಯ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.